- Kannada News Photo gallery Cricket photos Yashasvi Jaiswal Falls 10 Runs Short of Breaking Rahul Dravid's Record
ಕೇವಲ 10 ರನ್… ಯಶಸ್ವಿ ಜೈಸ್ವಾಲ್ ಪಾಲಿಗೆ ದ್ರಾವಿಡ್ ದಾಖಲೆ ಜಸ್ಟ್ ಮಿಸ್
Yashasvi Jaiswal: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ 107 ಎಸೆತಗಳನ್ನು ಎದುರಿಸಿ 13 ಫೋರ್ಗಳೊಂದಿಗೆ 87 ರನ್ ಕಲೆಹಾಕಿದ್ದರು. ಆದರೆ ಶತಕದಂಚಿನಲ್ಲಿ ಎಡವಿದ ಯುವ ದಾಂಡಿಗ ರಾಹುಲ್ ದ್ರಾವಿಡ್ ಅವರ ಹೆಸರಿನಲ್ಲಿರುವ ವಿಶೇಷ ದಾಖಲೆಯನ್ನು ಮುರಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡರು.
Updated on: Jul 03, 2025 | 2:54 PM

ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಅಬ್ಬರಿಸಿದ್ದಾರೆ. ಹೆಡಿಂಗ್ಲೆ ಟೆಸ್ಟ್ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಜೈಸ್ವಾಲ್ ಎಡ್ಜ್ಬಾಸ್ಟನ್ನಲ್ಲಿ 87 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕೇವಲ 13 ರನ್ಗಳಿಂದ ಮತ್ತೊಂದು ಸೆಂಚುರಿ ಸಿಡಿಸುವ ಅವಕಾಶವನ್ನು ತಪ್ಪಿಸಿಕೊಂಡರು.

ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 2000 ರನ್ ಕಲೆಹಾಕಿದ ದಾಖಲೆ ಮುರಿಯುವ ಅವಕಾಶವನ್ನು ಸಹ ಕೈ ಚೆಲ್ಲಿಕೊಂಡರು. ಅಂದರೆ ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್ನಲ್ಲಿ 97 ರನ್ಗಳಿಸಿದ್ದರೆ, ಭಾರತದ ಪರ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 2000 ರನ್ ಪೂರೈಸಿದ ಬ್ಯಾಟರ್ ಎಂಬ ದಾಖಲೆ ಯಶಸ್ವಿ ಪಾಲಾಗುತ್ತಿತ್ತು.

ಸದ್ಯ ಈ ದಾಖಲೆ ಟೆಸ್ಟ್ ಸ್ಪೆಷಲಿಸ್ಟ್ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಟೀಮ್ ಇಂಡಿಯಾ ಪರ ಆಡಿದ ಮೊದಲ 40 ಇನಿಂಗ್ಸ್ಗಳ ಮೂಲಕ ದ್ರಾವಿಡ್ 2000 ರನ್ ಕಲೆಹಾಕಿದ್ದರು. ಈ ಮೂಲಕ ಭಾರತದ ಪರ ಟೆಸ್ಟ್ನಲ್ಲಿ ಅತೀ ವೇಗವಾಗಿ 2 ಸಾವಿರ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.

ಈ ದಾಖಲೆಯನ್ನು ಮುರಿಯಲು ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 97 ರನ್ ಕಲೆಹಾಕಬೇಕಿತ್ತು. ಆದರೆ 87 ರನ್ಗಳಿಸಿ ಔಟಾಗುವ ಮೂಲಕ ಜೈಸ್ವಾಲ್ ಅಗ್ರಸ್ಥಾನಕ್ಕೇರುವ ಅವಕಾಶವನ್ನು ತಪ್ಪಿಸಿಕೊಂಡಿದ್ದಾರೆ. ಇದಾಗ್ಯೂ ಮುಂದಿನ ಇನಿಂಗ್ಸ್ನ ಮೂಲಕ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಸರಿಗಟ್ಟಬಹುದು.

ಟೀಮ್ ಇಂಡಿಯಾ ಪರ ಈವರೆಗೆ 21 ಟೆಸ್ಟ್ ಪಂದ್ಯಗಳನ್ನಾಡಿರುವ ಯಶಸ್ವಿ ಜೈಸ್ವಾಲ್ 39 ಇನಿಂಗ್ಸ್ಗಳ ಮೂಲಕ 1990 ರನ್ ಕಲೆಹಾಕಿದ್ದಾರೆ. ಮುಂದಿನ ಇನಿಂಗ್ಸ್ನಲ್ಲಿ 10 ರನ್ ಗಳಿಸಿದರೆ, ರಾಹುಲ್ ದ್ರಾವಿಡ್ ಹೆಸರಿನಲ್ಲಿರುವ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 2000 ರನ್ ಗಳಿಸಿದ ದಾಖಲೆಯನ್ನು ಸರಿಗಟ್ಟಬಹುದು.









