ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅಬ್ಬರಿಸುತ್ತಿದ್ದಾರೆ. ಇದುವರೆಗೆ ಆಡಿರುವ ನಾಲ್ಕು ಟೆಸ್ಟ್‌ಗಳಲ್ಲಿ ಎರಡು ದ್ವಿಶತಕಗಳ ನೆರವಿನಿಂದ 22ರ ಹರೆಯದ ಎಡಗೈ ಬ್ಯಾಟರ್ 655 ರನ್ ಗಳಿಸಿದ್ದಾರೆ. ಗುರುವಾರ (ಮಾರ್ಚ್ 7) ಧರ್ಮಶಾಲಾದಲ್ಲಿ ಆರಂಭವಾಗಲಿರುವ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲೂ ಜೈಸ್ವಾಲ್ ಮೇಲೆ ಎಲ್ಲರ ಕಣ್ಣಿದೆ.
ಆಂಗ್ಲರ ವಿರುದ್ಧದ ಐದನೇ ಟೆಸ್ಟ್‌ನಲ್ಲಿ, ಯಶಸ್ವಿ ಜೈಸ್ವಾಲ್ ಸರ್ ಡೊನಾಲ್ಡ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟಲು ಎದುರು ನೋಡುತ್ತಿದ್ದಾರೆ. ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸುವಲ್ಲಿ ಯಶಸ್ವಿಯಾದರೆ, ಅವರು ಟೆಸ್ಟ್ ಸರಣಿಯಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಇತಿಹಾಸದಲ್ಲಿ ಮತ್ತು ಒಟ್ಟಾರೆಯಾಗಿ ಬ್ರಾಡ್‌ಮನ್ ನಂತರ ಎರಡನೇ ಭಾರತೀಯ ಬ್ಯಾಟರ್ ಆಗುತ್ತಾರೆ.
1930 ರಲ್ಲಿ ಇಂಗ್ಲೆಂಡ್‌ನಲ್ಲಿ ಆಡಿದ ಆ್ಯಶಸ್ ಸರಣಿಯಲ್ಲಿ, ಬ್ರಾಡ್‌ಮನ್ ಲಾರ್ಡ್ಸ್‌ನಲ್ಲಿ ಆಡಿದ ಎರಡನೇ ಟೆಸ್ಟ್‌ನಲ್ಲಿ 254 ರನ್ ಗಳಿಸಿದರು, ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆಡಿದ ಮೂರನೇ ಟೆಸ್ಟ್‌ನಲ್ಲಿ 334 ರನ್‌ಗಳನ್ನು ಮತ್ತು ಓವಲ್‌ನಲ್ಲಿ ಆಡಿದ ಐದನೇ ಟೆಸ್ಟ್‌ನಲ್ಲಿ 232 ರನ್ ಗಳಿಸಿದ್ದರು. ಈ ಮೂಲಕ 3 ದ್ವಿಶತಕ ಸಿಡಿಸಿದ್ದರು.
ಆ ಸರಣಿಯಲ್ಲಿ, ಬ್ರಾಡ್‌ಮನ್ ಐದು ಪಂದ್ಯಗಳಲ್ಲಿ ಒಟ್ಟು 974 ರನ್‌ಗಳನ್ನು ಗಳಿಸಿದರು, ಯಾವುದೇ ಬ್ಯಾಟರ್‌ನಿಂದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ಇದಾಗಿದೆ. ಬ್ರಾಡ್‌ಮನ್ ದಾಖಲೆ ಸರಿಟಗಟಲು ಜೈಸ್ವಾಲ್ಗೆ ಒಂದು ದ್ವಿಶತಕ ಮತ್ತು ದಾಖಲೆ ಮುರಿಯಲು ಕನಿಷ್ಠ 320 ರನ್ ಗಳಿಸಬೇಕಾಗಿದೆ.
ತವರಿನಲ್ಲಿ ತನ್ನ ಮೊದಲ ಟೆಸ್ಟ್ ಸರಣಿ ಮತ್ತು ವೃತ್ತಿಜೀವನದಲ್ಲಿ ಒಟ್ಟಾರೆ ಮೂರನೇ ಪಂದ್ಯವನ್ನು ಆಡುತ್ತಿರುವ ಜೈಸ್ವಾಲ್, ಫೆಬ್ರವರಿ 3 ರಂದು ವಿಶಾಖಪಟ್ಟಣದ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 209 ರನ್ ಗಳಿಸಿದರು. ನಂತರ ಫೆಬ್ರವರಿ 18 ರಂದು ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ 236 ಎಸೆತಗಳಲ್ಲಿ 214 ರನ್ ಗಳಿಸಿ ಅಜೇಯರಾಗಿ ಉಳಿದರು.
ಮೂರನೇ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸುವ ಮೂಲಕ ಯಶಸ್ವಿ ಜೈಸ್ವಾಲ್ ಅವರು ವಿನೋದ್ ಕಾಂಬ್ಳಿ ಮತ್ತು ವಿರಾಟ್ ಕೊಹ್ಲಿ ನಂತರ ಭಾರತಕ್ಕಾಗಿ ಬ್ಯಾಕ್ ಟು ಬ್ಯಾಕ್ ದ್ವಿಶತಕಗಳನ್ನು ಗಳಿಸಿದ ಮೂರನೇ ಕ್ರಿಕೆಟಿಗರಾದರು. ಕಾಂಬ್ಳಿ 1993ರಲ್ಲಿ ಮತ್ತು ಕೊಹ್ಲಿ 2017ರಲ್ಲಿ ಭಾರತ-ಶ್ರೀಲಂಕಾ ಸರಣಿಯಲ್ಲಿ ಈ ಸಾಧನೆ ಮಾಡಿದ್ದರು.
Published On - 9:40 am, Sun, 3 March 24