
2025, ಏಪ್ರಿಲ್ 19 ಐಪಿಎಲ್ ಇತಿಹಾಸದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ಐಪಿಎಲ್ 2025 ರ 36 ನೇ ಪಂದ್ಯದಲ್ಲಿ, ರಾಜಸ್ಥಾನ ರಾಯಲ್ಸ್ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಲೀಗ್‌ನಲ್ಲಿ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ವೈಭವ್ ಕೇವಲ 14 ವರ್ಷ ವಯಸ್ಸಿನಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವೈಭವ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿದೆ. ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಗಾಯದ ಕಾರಣ ಆಡುತ್ತಿಲ್ಲ. ಹೀಗಾಗಿ ಅವರ ಜಾಗದಲ್ಲಿ ವೈಭವ್‌ಗೆ ಆಡುವ ಅವಕಾಶ ಸಿಕ್ಕಿದೆ.

ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರಿಯಾನ್ ಪರಾಗ್ ರಾಜಸ್ಥಾನ್ ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ರಿಯಾನ್ ಟಾಸ್ ಗೆಲ್ಲಲು ಸಾಧ್ಯವಾಗದಿದ್ದರೂ, ಪ್ಲೇಯಿಂಗ್ 11 ಹೆಸರಿಸುವ ವೇಳೆ ವೈಭವ್ ಸೂರ್ಯವಂಶಿಗೆ ಅವಕಾಶ ಸಿಕ್ಕಿರುವುದು ಖಚಿತವಾದ ಕೂಡಲೇ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ವೈಭವ್ ಪಾತ್ರರಾದರು.

ಬದಲಾವಣೆಗೆ ಬೇಡಿಕೆ ಇತ್ತು. ಅಭಿಮಾನಿಗಳು ಕೂಡ ವೈಭವ್‌ಗೆ ಅವಕಾಶ ನೀಡುವಂತೆ ಹಲವು ಬಾರಿ ಒತ್ತಾಯಿಸುತ್ತಿದ್ದರು. ಆದರೆ ಅಗ್ರ ಕ್ರಮಾಂಕದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ಆರಂಭಿಕ ಆಟಗಾರನಾಗಿ ಮಾತ್ರ ಆಡುವ ವೈಭವ್‌ಗೆ ಅವಕಾಶ ಸಿಗುತ್ತಿರಲಿಲ್ಲ. ಆದರೆ ನಾಯಕ ಸ್ಯಾಮ್ಸನ್ ಗಾಯಗೊಂಡಿದ್ದರಿಂದ ಅವರಿಗೆ ಅವಕಾಶ ಸಿಕ್ಕಿದೆ.

ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಸ್ಯಾಮ್ಸನ್ ಗಾಯಗೊಂಡು ಪೆವಿಲಿಯನ್ ಸೇರಿಕೊಂಡಿದ್ದರು. ಇದೀಗ ಸಕಾಲದಲ್ಲಿ ಅದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಎಡಗೈ ಬ್ಯಾಟರ್ ವೈಭವ್‌ಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಇದೀಗ 14 ವರ್ಷ, 23 ದಿನಗಳ ವಯಸ್ಸಿನಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನೆಂಬ ದಾಖಲೆ ವೈಭವ್ ಪಾಲಾಗಿದೆ.
Published On - 7:44 pm, Sat, 19 April 25