- Kannada News Photo gallery Cricket photos Yuzvendra Chahal Creates History he is the first Indian and 16th overall to complete a 300 wickets in T20s
Yuzvendra Chahal: ಆರ್ಸಿಬಿ vs ಮುಂಬೈ ಪಂದ್ಯದ ಮಧ್ಯೆ ಸುದ್ದಿಯಾಗದೆ ಹೋಯ್ತು ಯುಜ್ವೇಂದ್ರ ಚಹಲ್ ನಿರ್ಮಿಸಿದ ಇತಿಹಾಸ
SRH vs RR, IPL 2023: ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 72 ರನ್ಗಳ ಭರ್ಜರಿ ಜಯ ಸಾಧಿಸಿತು. ಆರ್ಆರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ 4 ವಿಕೆಟ್ ಕಿತ್ತು ಮಿಂಚಿದರು. ಇದರ ಜೊತೆಗೆ ಇತಿಹಾಸ ನಿರ್ಮಿಸಿದರು.
Updated on:Apr 03, 2023 | 11:33 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾನುವಾರ ಎರಡು ಪಂದ್ಯಗಳನ್ನು ಆಯೋಜಿಸಲಾಗಿತ್ತು. ಆದರೆ, ಎಲ್ಲರ ಕಣ್ಣಿದ್ದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯದ ಮೇಲೆ. ಇದಕ್ಕೂ ಮುನ್ನ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಣ ಪಂದ್ಯ ಅಷ್ಟೊಂದು ಹೈಪ್ ಕ್ರಿಯೆಟ್ ಮಾಡಿರಲಿಲ್ಲ.

ರಾಜಸ್ಥಾನ್ ರಾಯಲ್ಸ್ ಈ ಪಂದ್ಯದಲ್ಲಿ 200ಕ್ಕೂ ಅಧಿಕ ರನ್ ಕಲೆಹಾಕಿ 72 ರನ್ಗಳ ಭರ್ಜರಿ ಜಯ ಸಾಧಿಸಿತು. ಆರ್ಆರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ 4 ಓವರ್ ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಇದರ ಜೊತೆಗೆ ಇತಿಹಾಸ ನಿರ್ಮಿಸಿದರು.

ಹೈದರಾಬಾದ್ ವಿರುದ್ಧ 4 ವಿಕೆಟ್ಗಳನ್ನು ಕಬಳಿಸುವ ಮೂಲಕ ಯುಜ್ವೇಂದ್ರ ಚಹಲ್ ಟಿ20 ಮಾದರಿಯ ಕ್ರಿಕೆಟ್ನಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊಟ್ಟ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು. ಟಿ20 ಕ್ರಿಕೆಟ್ನಲ್ಲಿ ಇದುವರೆಗೆ ಯಾವ ಭಾರತೀಯ ಬೌಲರ್ ಕೂಡ 300 ವಿಕೆಟ್ ಪಡೆದ ಸಾಧನೆ ಮಾಡಿಲ್ಲ.

ತನ್ನ 265ನೇ ಟಿ20 ಪಂದ್ಯದಲ್ಲಿ ಚಹಾಲ್ ಇತಿಹಾಸ ನಿರ್ಮಿಸಿದ್ದಾರೆ. ಇದೀಗ ಇವರ ಖಾತೆಯಲ್ಲಿ 303 ಟಿ20 ವಿಕೆಟ್ಗಳಿವೆ. ಒಟ್ಟಾರೆಯಾಗಿ ಟಿ20 ಕ್ರಿಕೆಟ್ನಲ್ಲಿ 300+ ವಿಕೆಟ್ ಪಡೆದವರ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದ್ದಾರೆ.

ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಈವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ವೆಸ್ಟ್ ಇಂಡೀಸ್ನ ಡ್ವೇನ್ ಬ್ರಾವೋ ಆಗಿದ್ದಾರೆ. ಇವರು ಬರೋಬ್ಬರಿ 558 ವಿಕೆಟ್ ತಮ್ಮದಾಗಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ 530 ವಿಕೆಟ್ ಕಿತ್ತು ರಶೀದ್ ಖಾನ್ ಇದ್ದಾರೆ.

ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಸ್ಫೋಟಕ ಆರಂಭ ಪಡೆದುಕೊಂಡಿತು. ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್ಗೆ ಕೇವಲ 5.5 ಓವರ್ನಲ್ಲಿ 85 ರನ್ ಕಲೆಹಾಕಿದರು. ಬಟ್ಲರ್ ಕೇವಲ 22 ಎಸೆತಗಳಲ್ಲಿ 54 ರನ್ ಚಚ್ಚಿದರು.

ನಂತರ ನಾಯಕ ಸಂಜು ಸ್ಯಾಮ್ಸನ್ ಜೊತೆಯಾದ ಜೈಸ್ವಾಲ್ ಬಿರುಸಿನ ಆಟ ಪ್ರದರ್ಶಿಸಿದರು. ಜೈಸ್ವಾಲ್ 37 ಎಸೆತಗಳಲ್ಲಿ 54 ರನ್ ಬಾರಿಸಿದರೆ, ಸ್ಯಾಮ್ಸನ್ 32 ಎಸೆತಗಳಲ್ಲಿ 55 ರನ್ ಗಳಿಸಿದರು. ಹೆಟ್ಮೇರ್ ಅಜೇಯ 22 ರನ್ ಕಲೆಹಾಕಿದರು. ಆರ್ಆರ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.

ಟಾರ್ಗೆಟ್ ಬೆನ್ನಟ್ಟಿದ ಸನ್ರೈಸರ್ಸ್ ಆರಂಭದಿಂದ ವಿಕೆಟ್ ಕಳೆದುಕೊಂಡು ಸಾಗಿತು. ತಂಡದ ಪರ ಅಬ್ದುಲ್ ಸಮದ್ ಅಜೇಯ 32 ಮತ್ತು ಮಯಾಂಕ್ ಅಗರ್ವಾಲ್ 27 ರನ್ ಗಳಿಸಿದ್ದೇ ಹೆಚ್ಚು. ಹೈದರಾಬಾದ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಂಡಿತು.
Published On - 11:33 am, Mon, 3 April 23
