ಕ್ರಿಕೆಟ್ ವಲಯದಲ್ಲಿ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಚಾರ ಎಂದರೆ ವಿರಾಟ್ ಕೊಹ್ಲಿ ಫಾರ್ಮ್. ಎಷ್ಟರ ಮಟ್ಟಿಗೆ ಎಂದರೆ ಕೆಲ ಮಾಜಿ ಕ್ರಿಕೆಟಿಗರು ಕೊಹ್ಲಿಯನ್ನು ಟಿ20 ವಿಶ್ವಕಪ್ ಗೆ ಭಾರತ ತಂಡದಿಂದ ಹೊರಬಿಡಬೇಕು ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ಟೀಮ್ ಇಂಡಿಯಾ ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಅವರು ಕೊಹ್ಲಿ ಪರವಾಗಿ ಮಾತನಾಡಿದ್ದಾರೆ.
ಕೊಹ್ಲಿ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 50+ ಸರಾಸರಿ ಹೊಂದಿದ್ದಾರೆ, ಟಿ20 ವಿಶ್ವಕಪ್ ನಲ್ಲಿ ಪಂದ್ಯಶ್ರೇಷ್ಠ ಪಡೆದುಕೊಂಡಿದ್ದಾರೆ, ಎಲ್ಲ ಮಾದರಿಯ ಕ್ರಿಕೆಟ್ ಸೇರಿ ಒಟ್ಟು 70 ಶತಕ ಬಂದಿವೆ. ಅವರ ಸರಾಸರಿ ಒಮ್ಮೆ ನೀವು ನೋಡಿ ಎಂದು ಹೇಳಿದ್ದಾರೆ.
ಇಲ್ಲಿ ತೊಂದರೆ ಎಂದರೆ ಎಲ್ಲರೂ ಅವರ ಶತಕದ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ತಂಡದ ಗೆಲುವಿಗೆ ನೀಡಿದ 60-70 ರನ್ ಗಳ ಕೊಡುಗೆ ಕಾಣುತ್ತಿಲ್ಲ - ಯುಜ್ವೇಂದ್ರ ಚಹಲ್.
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಮಾತನಾಡಿದ ಚಹಲ್, ಇಬ್ಬರೂ ನಾಯಕತ್ವದ ಅಡಿಯಲ್ಲಿ ನನ್ನ ಪಾತ್ರ ಸಮವಾಗಿದೆ. ನನ್ನದು ವಿಕೆಟ್ ಟೇಕಿಂಗ್ ಪಾತ್ರ. ನನಗೆ ಇಬ್ಬರೂ ಒಂದೇ. ನಾನು ಏನು ಮಾಡಬೇಕು ಎಂದು ಅವರು ಸಲಹೆ ನೀಡುತ್ತಾ ಇರುತ್ತಾರೆ ಎಂದು ಚಹಲ್ ಹೇಳಿದ್ದಾರೆ.
ಇತ್ತೀಚೆಗಷ್ಟೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ವಿರಾಟ್ ಕೊಹ್ಲಿ ಸದ್ಯದಲ್ಲಿಯೇ ಫಾರ್ಮ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ಮಾಡಲಿ, ಹೆಚ್ಚು ಪಂದ್ಯಗಳನ್ನು ಆಡಲಿ. ಅವರು ದೊಡ್ಡ ಆಟಗಾರ ಮತ್ತು ಸಾಕಷ್ಟು ರನ್ ಗಳಿಸಿದ್ದಾರೆ. ಅವರು ಖಂಡಿತ ಪುನರಾಗಮನ ಮಾಡುತ್ತಾರೆ ಎಂಬ ಭರವಸೆ ನನಗಿದೆ. ಅವರು ಕೇವಲ ಶತಕ ಗಳಿಸಲು ಸಾಧ್ಯವಾಗುತ್ತಿಲ್ಲ. ಮುಂಬರುವ ಏಷ್ಯಾಕಪ್‌ನಲ್ಲಿ ತಮ್ಮ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ - ಸೌರವ್ ಗಂಗೂಲಿ.
ವಿರಾಟ್ ಕೊಹ್ಲಿ ಈಗ ವಿಶ್ರಾಂತಿಯಲ್ಲಿದ್ದು ಇದೇ ಆಗಸ್ಟ್ 27ರಿಂದ ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾಕಪ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಗಸ್ಟ್ 28ರಂದು ಸೆಣಸಾಟ ನಡೆಸಲಿದೆ.
Published On - 11:21 am, Sat, 20 August 22