ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಪ್ರಸ್ತುತ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಅತ್ತ ಬಾಂಗ್ಲಾದೇಶ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾಗಿಲ್ಲ. ಇದಾಗ್ಯೂ ಚಹಲ್ ಅವರ ಸ್ಪಿನ್ ಮೋಡಿ ಮಾತ್ರ ಮುಂದುವರೆದಿದೆ. ಅದು ಸಹ ದೂರದ ಇಂಗ್ಲೆಂಡ್ನಲ್ಲಿ ಎಂಬುದು ವಿಶೇಷ.
ಹೌದು, ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಯುಜ್ವೇಂದ್ರ ಚಹಲ್ ಇಂಗ್ಲೆಂಡ್ನಲ್ಲಿ ಕೌಂಟಿ ಚಾಂಪಿಯನ್ಶಿಪ್ ಟೂರ್ನಿ ಆಡುತ್ತಿದ್ದಾರೆ. ನಾರ್ಥಾಂಪ್ಟನ್ ಶೈರ್ ಪರ ಹೊಸ ಇನಿಂಗ್ಸ್ ಆರಂಭಿಸಿರುವ ಚಹಲ್ ಇದೀಗ 9 ವಿಕೆಟ್ ಕಬಳಿಸಿ ಸಂಚಲನ ಸೃಷ್ಟಿಸಿದ್ದಾರೆ.
ನಾರ್ಥಾಂಪ್ಟನ್ನ ಕೌಂಟಿ ಮೈದಾನದಲ್ಲಿ ನಡೆದ ಕೌಂಟಿ ಚಾಂಪಿಯನ್ಶಿಪ್ನ 47ನೇ ಪಂದ್ಯದಲ್ಲಿ ನಾರ್ಥಾಂಪ್ಟನ್ ಶೈರ್ ಮತ್ತು ಡರ್ಬಿಶೈರ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನಾರ್ಥಾಂಪ್ಟನ್ ಶೈರ್ 219 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಡರ್ಬಿಶೈರ್ ವಿರುದ್ಧ ಚಹಲ್ ಸ್ಪಿನ್ ಮೋಡಿ ಮಾಡಿದರು.
ಲೆಗ್ ಸ್ಪಿನ್ ಮೂಲಕ ಡರ್ಬಿಶೈರ್ ಬ್ಯಾಟರ್ಗಳನ್ನು ಕಟ್ಟಿಹಾಕಿದ ಯುಜ್ವೇಂದ್ರ ಚಹಲ್ 16.3 ಓವರ್ಗಳಲ್ಲಿ ಕೇವಲ 45 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಎದುರಾಳಿ ತಂಡವು ಕೇವಲ 165 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ನಾರ್ಥಾಂಪ್ಟನ್ ಶೈರ್ ತಂಡವು 211 ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಮೊದಲ ಇನಿಂಗ್ಸ್ನ ಹಿನ್ನಡೆಯೊಂದಿಗೆ ಕೇವಲ 266 ರನ್ಗಳ ಗುರಿ ಪಡೆದ ಡರ್ಬಿಶೈರ್ಗೆ ಮತ್ತೊಮ್ಮೆ ಆಘಾತ ನೀಡುವಲ್ಲಿ ಯುಜ್ವೇಂದ್ರ ಚಹಲ್ ಯಶಸ್ವಿಯಾದರು. ಈ ಇನಿಂಗ್ಸ್ನಲ್ಲಿ 18 ಓವರ್ಗಳನ್ನು ಎಸೆದ ಚಹಲ್ ಕೇವಲ 54 ರನ್ ನೀಡಿ 4 ವಿಕೆಟ್ ಉರುಳಿಸಿದರು. ಪರಿಣಾಮ ಡರ್ಬಿಶೈರ್ ತಂಡವು ಕೇವಲ 132 ರನ್ಗಳಿಗೆ ಆಲೌಟ್ ಆಯಿತು.
ಇತ್ತ ಯುಜ್ವೇಂದ್ರ ಚಹಲ್ ಅವರ ಸ್ಪಿನ್ ಮೋಡಿಯೊಂದಿಗೆ ನಾರ್ಥಾಂಪ್ಟನ್ ಶೈರ್ ತಂಡವು ಈ ಪಂದ್ಯದಲ್ಲಿ 133 ರನ್ಗಳ ಭರ್ಜರಿ ಜಯ ಸಾಧಿಸಿದೆ. ಅಂದಹಾಗೆ ಈ 9 ವಿಕೆಟ್ಗಳೊಂದಿಗೆ ಚಹಲ್ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 100 ವಿಕೆಟ್ಗಳನ್ನು ಪೂರೈಸಿರುವುದು ವಿಶೇಷ.
Published On - 2:08 pm, Thu, 12 September 24