
ICC World Cup Qualifiers 2023: ಹರಾರೆಯಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಝಿಂಬಾಬ್ವೆ ತಂಡವು ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡವು ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡಕ್ಕೆ ಆರಂಭಿಕ ಆಟಗಾರ ಜಾಯ್ಲಾರ್ಡ್ ಗುಂಬಿ (78) ಹಾಗೂ ಇನ್ನೊಸೆಂಟ್ (32) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಕಣಕ್ಕಿಳಿದ ನಾಯಕ ಸೀನ್ ವಿಲಿಯಮ್ಸ್ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.

3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ವಿಲಿಯಮ್ಸ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನಟಿದರು. ಪರಿಣಾಮ 65 ಎಸೆತಗಳಲ್ಲಿ ಶತಕ ಮೂಡಿಬಂತು. ಇದಾದ ಬಳಿಕ ಅಬ್ಬರ ಮುಂದುವರೆಸಿದ ವಿಲಿಯಮ್ಸ್ ಯುಎಎಸ್ ಬೌಲರ್ಗಳ ಬೆಂಡೆತ್ತಿದರು.

ಭರ್ಜರಿ ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ವಿಲಿಯಮ್ಸ್ 5 ಭರ್ಜರಿ ಸಿಕ್ಸ್ ಹಾಗೂ 21 ಫೋರ್ಗಳನ್ನು ಸಿಡಿಸಿದರು. ಅಲ್ಲದೆ 101 ಎಸೆತಗಳಲ್ಲಿ 174 ರನ್ ಬಾರಿಸಿ ವಿಕೆಟ್ ಒಪ್ಪಿದರು.

ಇನ್ನು ಅಂತಿಮ ಓವರ್ಗಳ ವೇಳೆ ಸಿಕಂದರ್ ರಾಝ 27 ಎಸೆತಗಳಲ್ಲಿ 48 ರನ್ ಬಾರಿಸಿದರೆ, ರಯಾನ್ ಬರ್ಲ್ 16 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ನೊಂದಿಗೆ 47 ರನ್ ಸಿಡಿಸಿದರು. ಪರಿಣಾಮ ಝಿಂಬಾಬ್ವೆ ತಂಡದ ಮೊತ್ತ 400 ರ ಗಡಿದಾಟಿತು. ಅಂತಿಮವಾಗಿ ನಿಗದಿತ 50 ಓವರ್ಗಳಲ್ಲಿ ಝಿಂಬಾಬ್ವೆ 6 ವಿಕೆಟ್ ಕಳೆದುಕೊಂಡು 408 ರನ್ ಕಲೆಹಾಕಿತು.

ಇದು ಏಕದಿನ ಕ್ರಿಕೆಟ್ನಲ್ಲಿ ಝಿಂಬಾಬ್ವೆ ತಂಡದ ಅತ್ಯಧಿಕ ಸ್ಕೋರ್ ಆಗಿದೆ. ಇದಕ್ಕೂ ಮುನ್ನ 2009 ರಲ್ಲಿ ಕೀನ್ಯಾ ವಿರುದ್ಧ 351 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಯುಎಸ್ಎ ವಿರುದ್ಧ 408 ರನ್ ಕಲೆಹಾಕಿ ಹೊಸ ಇತಿಹಾಸ ನಿರ್ಮಿಸಿದೆ.
Published On - 6:17 pm, Mon, 26 June 23