
ಫುಟ್ಬಾಲ್ ಅಂಗಳದ ಕಾಲ್ಚಳಕದ ಚುತರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಮುಂದಿನ ಕ್ಲಬ್ ಯಾವುದು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮುಂದಿನ ಎರಡೂವರೆ ವರ್ಷಗಳ ಕಾಲ CR7 ಸೌದಿ ಅರೇಬಿಯಾದ ಅಲ್ ನಾಸ್ರ್ ಕ್ಲಬ್ ಕಣಕ್ಕಿಳಿಯಲಿದ್ದಾರೆ.

ಏಷ್ಯಾದ ಪ್ರತಿಷ್ಠಿತ ಕ್ಲಬ್ಗಳಲ್ಲಿ ಒಂದಾಗಿರುವ ಅಲ್ ನಾಸ್ರ್ ಫ್ರಾಂಚೈಸಿಯು ಕ್ರಿಸ್ಟಿಯಾನೊ ರೊನಾಲ್ಡೊ ಜೊತೆ ವಾರ್ಷಿಕ 200 ಮಿಲಿಯನ್ ಯುರೋಗೆ ಒಪ್ಪಂದ ಮಾಡಿಕೊಂಡಿದೆ. ಅಂದರೆ ಭಾರತೀಯ ರೂ. ಮೌಲ್ಯ ವರ್ಷಕ್ಕೆ 1770 ಕೋಟಿ ರೂ. ಅದರಂತೆ ಕ್ರಿಸ್ಟಿಯಾಯೊ ಪ್ರತಿದಿನ ಸುಮಾರು 4.84 ಕೋಟಿ ರೂ. ವೇತನ ಪಡೆಯಲಿದ್ದಾರೆ. ವಿಶೇಷ ಎಂದರೆ ಇದು ರೊನಾಲ್ಡೊ ಅವರ 5ನೇ ಕ್ಲಬ್ ಒಪ್ಪಂದ. ಇದಕ್ಕೂ ಮುನ್ನ ಪೋರ್ಚುಗಲ್ ಆಟಗಾರ 4 ಕ್ಲಬ್ ಪರ ಆಡಿದ್ದಾರೆ. ಆ ತಂಡಗಳು ಯಾವುದೆಂದರೆ....

1- ಸ್ಪೋರ್ಟಿಂಗ್ ಕ್ಲಬ್: ಕ್ರಿಸ್ಟಿಯಾನೊ ತಮ್ಮ ಫುಟ್ಬಾಲ್ ಕೆರಿಯರ್ ಆರಂಭಿಸಿದ್ದು ಪೋರ್ಚುಗಲ್ನ ಸ್ಪೋಟಿಂಗ್ ಕ್ಲಬ್ ಮೂಲಕ. ಸ್ಪೋರ್ಟಿಂಗ್ ಪರ 2002 ರಿಂದ 2003 ರಿಂದ 31 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ರೊನಾಲ್ಡೊ ಒಟ್ಟು 5 ಗೋಲು ಬಾರಿಸಿದ್ದರು.

2- ಮ್ಯಾಚೆಂಸ್ಟರ್ ಯುನೈಟೆಡ್: ಸ್ಪೋರ್ಟಿಂಗ್ ಕ್ಲಬ್ನಲ್ಲಿ ಯುವ ತರುಣನ ಅದ್ಭುತ ಆಟ ವೀಕ್ಷಿಸಿದ್ದ ಅಂದಿನ ಮ್ಯಾಚೆಂಸ್ಟರ್ ಯುನೈಟೆಡ್ ಕ್ಲಬ್ನ ಮ್ಯಾನೇಜರ್ ಅಲೆಕ್ಸ್ ಫರ್ಗುಸನ್ ರೊನಾಲ್ಡೊ ಅವರ ಮೇಲೆ ಕಣ್ಣಿಟ್ಟಿದ್ದರು. ಅದರಂತೆ 2003 ರಲ್ಲಿ ಪೋರ್ಚುಗಲ್ನ ಯುವ ಆಟಗಾರನನ್ನು ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಆಯ್ಕೆ ಮಾಡಿದ್ದರು. 2003 ರಿಂದ 2009 ರವರೆಗೆ ಯುನೈಟೆಡ್ ತಂಡವನ್ನು ಪ್ರತಿನಿಧಿಸಿದ್ದ ರೊನಾಲ್ಡೊ 292 ಪಂದ್ಯಗಳಿಂದ 118 ಗೋಲು ಬಾರಿಸಿ ಮಿಂಚಿದ್ದರು.

3- ರಿಯಲ್ ಮ್ಯಾಡ್ರಿಡ್: 2009 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡವನ್ನು ತೊರೆದಿದ್ದ ರೊನಾಲ್ಡೊ ಆ ಬಳಿಕ ಸ್ಪೇನ್ನ ಪ್ರತಿಷ್ಠಿತ ಕ್ಲಬ್ ರಿಯಲ್ ಮ್ಯಾಡ್ರಿಡ್ ಪರ ಕಣಕ್ಕಿಳಿದಿದ್ದರು. 2009 ರಿಂದ 2018 ರವರೆಗೆ ಮ್ಯಾಡ್ರಿಡ್ ಪರ ಅತ್ಯಾದ್ಭುತ ಪ್ರದರ್ಶನ ನೀಡಿದ ಕ್ರಿಸ್ಟಿಯಾನೊ 438 ಪಂದ್ಯಗಳಲ್ಲಿ 450 ಗೋಲು ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು.

4- ಯುವೆಂಟಸ್: 2018 ರಲ್ಲಿ ರಿಯಲ್ ಮ್ಯಾಡ್ರಿಡ್ ತಂಡದಿಂದ ಹೊರಬಂದ ರೊನಾಲ್ಡೊ ಇಟಲಿ ಕ್ಲಬ್ ಯುವೆಂಟಸ್ ಪರ ಒಪ್ಪಂದ ಮಾಡಿಕೊಂಡರು. 2018 ರಿಂದ 2021 ರವರೆಗೆ 134 ಪಂದ್ಯಗಳಲ್ಲಿ ಯುವೆಂಟಸ್ ಪರ ಕಣಕ್ಕಿಳಿದ ಪೋರ್ಚುಗೀಸ್ ಸ್ಟಾರ್ ಒಟ್ಟು 101 ಗೋಲು ಬಾರಿಸಿದ್ದರು.

5- ಮ್ಯಾಂಚೆಸ್ಟರ್ ಯುನೈಟೆಡ್: 2021 ರಲ್ಲಿ ಯುವೆಂಟಸ್ ತಂಡವನ್ನು ತೊರೆದ ಕ್ರಿಸ್ಟಿಯಾನೊ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಮರಳಿದ್ದರು. 2021 ರಿಂದ 2022ರವರೆಗೆ ಮ್ಯಾಚೆಂಸ್ಟರ್ ಪರ ಆಡಿದ್ದ ಕ್ರಿಸ್ಟಿಯಾನೊ ಒಟ್ಟು 24 ಗೋಲುಗಳನ್ನು ಬಾರಿಸಿದ್ದರು.

6- ಅಲ್ ನಾಸ್ರ್: ಇದೀಗ 37 ವರ್ಷದ ಕ್ರಿಸ್ಟಿಯಾನೊ ರೊನಾಲ್ಡೊ 5ನೇ ಕ್ಲಬ್ ಪರ ಒಪ್ಪಂದ ಮಾಡಿಕೊಂಡಿದ್ದಾರೆ. ಅದರಂತೆ 2022 ರಿಂದ 2025 ರವರೆಗೆ ರೊನಾಲ್ಡೊ ಸೌದಿ ಕ್ಲಬ್ ಪರ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಈ ಕ್ಲಬ್ನೊಂದಿಗೆ ಫುಟ್ಬಾಲ್ ಅಂಗಳಕ್ಕೆ ವಿದಾಯ ಹೇಳುವ ಸಾಧ್ಯತೆಯಿದೆ.