ICC Awards 2022: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2022ರ ಟೆಸ್ಟ್ ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಇದರಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ ಎಂಬುದೇ ಅಚ್ಚರಿ. ಹಾಗಿದ್ರೆ ಈ ವರ್ಷದ ಟೆಸ್ಟ್ ಕ್ರಿಕೆಟಿಗನ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಆಟಗಾರರು ಯಾರೆಂದು ನೋಡೋಣ...
ಬೆನ್ ಸ್ಟೋಕ್ಸ್: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ 2022ರಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 870 ರನ್ ಮತ್ತು 26 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು 9 ಪಂದ್ಯಗಳನ್ನು ಗೆದ್ದುಕೊಂಡಿದೆ. ಹೀಗಾಗಿಯೇ ವರ್ಷ ಟೆಸ್ಟ್ ಕ್ರಿಕೆಟಿಗರ ನಾಮನಿರ್ದೇಶಿತ ಪಟ್ಟಿಯಲ್ಲಿ ಸ್ಟೋಕ್ಸ್ ಹೆಸರು ಅಗ್ರಸ್ಥಾನದಲ್ಲಿದೆ.
ಜಾನಿ ಬೈರ್ಸ್ಟೋವ್: ಇಂಗ್ಲೆಂಡ್ನ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 2022 ರಲ್ಲಿ ಒಟ್ಟು 10 ಪಂದ್ಯಗಳನ್ನಾಡಿರುವ ಬೈರ್ಸ್ಟೋವ್ ಒಟ್ಟು 1061 ರನ್ ಕಲೆಹಾಕಿದ್ದಾರೆ. ಈ ಅದ್ಭುತ ಪ್ರದರ್ಶನದ ಫಲವಾಗಿ ಜಾನಿ ಹೆಸರು ಕೂಡ ವರ್ಷದ ಟೆಸ್ಟ್ ಕ್ರಿಕೆಟಿಗರ ನಾಮನಿರ್ದೇಶಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಉಸ್ಮಾನ್ ಖ್ವಾಜಾ: ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಕೂಡ 2022 ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಒಟ್ಟು 11 ಪಂದ್ಯಗಳನ್ನು ಬ್ಯಾಟ್ ಬೀಸಿರುವ ಖ್ವಾಜಾ ಒಟ್ಟು 1080 ರನ್ ಕಲೆಹಾಕಿದ್ದಾರೆ.
ಕಗಿಸೊ ರಬಾಡ: ಈ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಏಕೈಕ ಬೌಲರ್ ಎಂದರೆ ಕಗಿಸೊ ರಬಾಡ. ಈ ವರ್ಷ 9 ಟೆಸ್ಟ್ ಪಂದ್ಯಗಳಲ್ಲಿ ಕರಾರುವಾಕ್ ದಾಳಿ ಸಂಘಟಿಸಿದ್ದ ಸೌತ್ ಆಫ್ರಿಕಾ ವೇಗಿ ಒಟ್ಟು 47 ವಿಕೆಟ್ ಉರುಳಿಸಿದ್ದಾರೆ. ಈ ಮೂಲಕ ವರ್ಷದ ಟೆಸ್ಟ್ ಕ್ರಿಕೆಟಿಗನಾಗಿ ಹೊರಹೊಮ್ಮುವ ವಿಶ್ವಾಸದಲ್ಲಿದ್ದಾರೆ ಕಗಿಸೊ ರಬಾಡ.
Published On - 3:25 pm, Sat, 31 December 22