ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ನು ಐದು ದಿನ ಮಾತ್ರ ಬಾಕಿ ಉಳಿದಿದೆ. ಇದರ ನಡುವೆಯೇ ರಾಜವಂಶಸ್ಥರು ನಡೆಸುವ ಪಾರಂಪರಿಕ ದಸರಾ ಉತ್ಸವಕ್ಕೂ ತಯಾರಿ ಆರಂಭವಾಗಿದೆ. ಇಂದು ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯದೊಂದಿಗೆ ಅರಮನೆಯಲ್ಲಿ ನವರಾತ್ರಿ ಸಂಭ್ರಮದ ತಯಾರಿ ಜೋರಾಗಿ ನಡೆದಿದೆ.
ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸುವುದರ ಮೂಲಕ ನವರಾತ್ರಿ ಆರಂಭವಾಗುತ್ತದೆ. ಇದಕ್ಕಾಗಿ ಮೈಸೂರು ಅರಮನೆಯ ಒಳಾವರಣದಲ್ಲಿ ಇಂದು ಸಿಂಹಾಸನ ಜೋಡಿಸಲಾಯಿತು.
ನವರಾತ್ರಿಯ ಮೊದಲ ದಿನ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನದ ಮೇಲೆ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ವರ್ಷ ಪೂರ್ತಿ ಅರಮನೆ ಖಜಾನೆಯಲ್ಲಿರುವ ಮುತ್ತು, ರತ್ನ, ಪಚ್ಚೆ ಸೇರಿದಂತೆ ಅಮೂಲ್ಯ ಆಭರಣಗಳನ್ನು ಒಳಗೊಂಡಿರುವ ಸಿಂಹಾಸನದ ಬಿಡಿ ಭಾಗಗಳನ್ನು ಇಂದು ಹೊರಗೆ ತೆಗೆಯಲಾಯಿತು.
ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.