ವೀಕೆಂಡ್ನಲ್ಲೂ ಬಿಬಿಎಂಪಿಯ ಅಧಿಕಾರಿಗಳ ಜೊತೆ ರೌಂಡ್ಸ್ ಹಾಕಿದ ಡಿಸಿಎಂ ಡಿಕೆ ಶಿವಕುಮಾರ್, ತಾವೇ ಟೇಪ್ ಹಿಡಿದು ವೈಟ್ ಟಾಪಿಂಗ್ ರೋಡ್ ಗಳ ಗುಣಮಟ್ಟ ಪರಿಕ್ಷೀಸಿದ್ದಾರೆ.
ಬೆಂಗಳೂರನ್ನು ಬ್ರ್ಯಾಂಡ್ ಮಾಡುತ್ತೇವೆ ಎಂದಿದ್ದ ಸರ್ಕಾರ, ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯಡಿಯಲ್ಲಿ ರಾಜಧಾನಿಯ ರಸ್ತೆಗಳನ್ನ ವೈಟ್ ಟಾಪಿಂಗ್ ಮಾಡಲು ಮುಂದಾಗಿತ್ತು. ಇತ್ತ ಕಳೆದ ಎರಡ್ಮೂರು ತಿಂಗಳ ಹಿಂದಷ್ಟೇ ಬೆಂಗಳೂರಿನ ಹಲವೆಡೆ ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್, ಇಂದು ಬಿಬಿಎಂಪಿಯ ಅಧಿಕಾರಿಗಳ ಜೊತೆ ಸೇರಿ ನಗರದ ಹಲವೆಡೆ ನಡೆಯುತ್ತಿರೋ ವೈಟ್ ಟಾಪಿಂಗ್ ಕಾಮಗಾರಿಗಳನ್ನ ಪರಿಶೀಲಿಸಿದರು.
ರಾಜಾಜಿನಗರದಿಂದ ಸಿಟಿರೌಂಡ್ಸ್ ಶುರುಮಾಡಿದ ಡಿಕೆಶಿ, ಯಶವಂತಪುರ, ಜಾಲಹಳ್ಳಿ, ನೆಟ್ಟಕಲ್ಲಪ್ಪ ಸರ್ಕಲ್ ಸೇರಿ ಹಲವೆಡೆ ವೈಟ್ ಟಾಪಿಂಗ್ ಕಾಮಗಾರಿಗಳನ್ನ ಪರಿಶೀಲನೆ ನಡೆಸಿದರು.
ಇನ್ನು ರಾಜಧಾನಿಯ ರಸ್ತೆಗಳನ್ನು ಗುಣಮಟ್ಟದ ರಸ್ತೆಗಳಾಗಿ ಜನರ ಬಳಕೆಗೆ ಸಿಗುವಂತೆ ಮಾಡಲು ಸದ್ಯ ಬೆಂಗಳೂರಿನ ವಿವಿಧೆಡೆ 150 ಕಿಲೋಮೀಟರ್ ರಸ್ತೆಗೆ ವೈಟ್ ಟಾಪಿಂಗ್ ಮಾಡಲು ಸರ್ಕಾರ ಕೆಲಸ ಆರಂಭಿಸಿದೆ. ಸದ್ಯ ರಾಜಾಜಿನಗರ 10ನೇ ಕ್ರಾಸ್, ಯಶವಂತಪುರದ MEI ರಸ್ತೆಗಳಲ್ಲಿ ಈಗಾಗಲೇ ಕಾಮಗಾರಿ ಕೊನೆ ಹಂತ ತಲುಪಿದ್ದು ಸ್ವತಃ ಟೇಪ್ ಹಿಡಿದು ಅಖಾಡಕ್ಕಿಳಿದ ಡಿಸಿಎಂ, ರಸ್ತೆಗಳ ಗುಣಮಟ್ಟ ಪರಿಶೀಲಿಸಿದರು. ಬಳಿಕ ಮಾತನಾಡಿದ ಡಿಕೆಶಿ, ಬೆಂಗಳೂರಿನ ರಸ್ತೆಗಳನ್ನ ವೈಟ್ ಟಾಪಿಂಗ್ ಮಾಡೋಕೆ 1700 ಕೋಟಿ ರೂ. ಮೀಸಲಿಟ್ಟಿದ್ದೇವೆ, ಸದ್ಯ ಈ ರಸ್ತೆಗಳಲ್ಲಿ ಗುಣಮಟ್ಟ ಹೇಗಿದೆ ಎಂಬುದನ್ನು ತಿಳಿಯಲು ಇವತ್ತು ಕಾಮಗಾರಿಗಳನ್ನು ಪರಿಶೀಲಿಸುತ್ತಿದ್ದೇನೆ ಎಂದರು.
ಇತ್ತ ವೈಟ್ ಟಾಪಿಂಗ್ ಕಾಮಗಾರಿಗಳನ್ನ ವೀಕ್ಷಿಸಲು ಹೊರಟ ಡಿಸಿಎಂಗೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿಯ ಚೀಫ್ ಇಂಜಿನಿಯರ್ ಪ್ರಹ್ಲಾದ್ ಸೇರಿ ಹಲವು ಅಧಿಕಾರಿಗಳು ಸಾಥ್ ನೀಡಿದರು. ಇದೇ ವೇಳೆ ರಾಜಾಜಿನಗರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಯಿಂದ ವಾಹನ ದಟ್ಟಣೆ ಹೆಚ್ಚಾಗ್ತಿದ್ದ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ನೀಡುವ ಭರವಸೆ ನೀಡಿದ ಸ್ಥಳೀಯ ಶಾಸಕ ಗೋಪಾಲಯ್ಯ, ಈಗಾಗಲೇ ಕಾಮಗಾರಿ ಮುಗಿದಿದೆ ಶಿವರಾತ್ರಿ ಒಳಗಾಗಿ ಈ ಭಾಗದ ರಸ್ತೆಯನ್ನ ಸಾರ್ವಜನಿಕರ ಬಳಕೆಗೆ ಕೊಡಲು ಕ್ರಮವಹಿಸಿದ್ದೇವೆ ಎಂದರು.
ಒಟ್ಟಿನಲ್ಲಿ ಬ್ರ್ಯಾಂಡ್ ಬೆಂಗಳೂರಿನ ಹೆಸರಲ್ಲಿ ರಾಜಧಾನಿಯ ಹಲವು ರಸ್ತೆಗಳು ವೈಟ್ ಟಾಪಿಂಗ್ ಸ್ಪರ್ಶ ಪಡೆಯುತ್ತಿದ್ದು, ಇದೀಗ ಹಲವೆಡೆ ಕಾಮಗಾರಿಗಳು ಕೂಡ ಮುಗಿಯೋ ಹಂತ ತಲುಪಿದೆ. ಇತ್ತ ನಗರದ ಹಲವೆಡೆ ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿರೋ ಡಿಸಿಎಂ ಕೂಡ ಶೀಘ್ರದಲ್ಲೇ ಕಾಮಗಾರಿ ಮುಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯ ವೈಟ್ ಟಾಪಿಂಗ್ ಟಚ್ ನಿಂದ ರಾಜಧಾನಿಯ ರಸ್ತೆಗಳ ಸಮಸ್ಯೆ ಸ್ವಲ್ಪವಾದ್ರೂ ಬಗೆಹರಿಯುತ್ತ ಎಂಬುದನ್ನು ಕಾದುನೋಡಬೇಕಿದೆ.
Published On - 8:21 pm, Sun, 16 February 25