Kannada News Photo gallery DCM DK Shivakumar makes city rounds at night to check road pothole sealing work in Bangalore, TV9 report impact
ಟಿವಿ9 ವರದಿ ಫಲಶ್ರುತಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪರಿಶೀಲಿಸಲು ಡಿಕೆ ಶಿವಕುಮಾರ್ ರಾತ್ರಿ ಸಿಟಿ ರೌಂಡ್ಸ್
Prajwal Kumar NY | Updated By: Ganapathi Sharma
Updated on:
Sep 24, 2024 | 7:06 AM
ಬೆಂಗಳೂರು, ಸೆಪ್ಟೆಂಬರ್ 24: ಬೆಂಗಳೂರಲ್ಲಿ ರಸ್ತೆ ಗುಂಡಿ ಮುಚ್ಚಲು ಡಿಸಿಎಂ ಡಿಕೆ ಶಿವಕುಮಾರ್ ನೀಡಿದ್ದ ಡೆಡ್ ಲೈನ್ ಮುಗಿದ ಕಾರಣ ಅವರು, ಭಾನುವಾರ ತಡರಾತ್ರಿ ನಗರದ ರಸ್ತೆ ಕಾಮಗಾರಿ ವೀಕ್ಷಣೆ ನಡೆಸಿದ್ದಾರೆ. ಇದರಿಂದಾಗಿ ರಾಜಧಾನಿಯಲ್ಲಿ ತಡರಾತ್ರಿ ಅಧಿಕಾರಿಗಳು ಗಡಿಬಿಡಿಯಲ್ಲಿದ್ದರು. ಕಾರ್ಮಿಕರು ತಮ್ಮ ಕೆಲ್ಸಕ್ಕೆ ಚುರುಕು ಮುಟ್ಟಿಸಿದ್ದರು. ಟಿವಿ9 ವರದಿಯ ಪರಿಣಾಮ ಡಿಸಿಎಂ ಡಿಕೆ ಶಿವಕುಮಾರ್ ರಾತ್ರಿ ಸಿಟಿ ರೌಂಡ್ಸ್ ಕೈಗೊಂಡರು.
1 / 8
ಸಿಲಿಕಾನ್ ಸಿಟಿ, ತಂತ್ರಜ್ಞಾನದ ಹಬ್ ಎಂದೆಲ್ಲ ಖ್ಯಾತಿ ಗಳಿಸಿದ ಬೆಂಗಳೂರು ಗುಂಡಿಗಳ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ರಸ್ತೆ ಗುಂಡಿಗಳ ಬಗ್ಗೆ ‘ಟಿವಿ9’ ನಿರಂತರ ಅಭಿಯಾನ ನಡೆಸಿತ್ತು. ಇದಕ್ಕೆ ಸ್ಪಂದಿಸಿದ್ದ ಬೆಂಗಳೂರು ಜಿಲ್ಲಾ ಉಸ್ತುವಾರಿ ಕಮ್ ಡಿಸಿಎಂ ಡಿಕೆ ಶಿವಕುಮಾರ್, ಡೆಡ್ಲಿ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ 15 ದಿನಗಳ ಗಡುವು ನೀಡಿದ್ದರು.
2 / 8
ಅದರಂತೆ ಅಧಿಕಾರಿಗಳು, ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಹಗಲು ರಾತ್ರಿ ಎನ್ನದೇ ಗುಂಡಿಗಳಿಗೆ ತೇಪೆ ಹಾಕಿಸುವ ಕೆಲಸ ಮಾಡಿದ್ದರು. ಬಳಿಕ ಫೋಟೋ, ವಿಡಿಯೋ ಸಮೇತ ಡಿಸಿಎಂಗೆ ವರದಿ ನೀಡಿದ್ದರು. ಅಧಿಕಾರಿಗಳ ರಿಪೋರ್ಟ್ನಲ್ಲಿ ಸುಳ್ಳೆಷ್ಟು? ಸತ್ಯವೆಷ್ಟು ಎಂಬುದನ್ನು ಕಣ್ಣಾರೆ ನೋಡಬೇಕೆಂದು ಡಿಕೆ ಶಿವಕುಮಾರ್ ರಾತ್ರಿ ನಗರ ಪ್ರದಕ್ಷಿಣೆ ಹಾಕಿದರು.
3 / 8
ಸದಾಶಿವನಗರದಲ್ಲಿರುವ ತಮ್ಮ ನಿವಾಸದಿಂದ ಹೊರಟ ಡಿಸಿಎಂ ಡಿಕೆ ಶಿವಕುಮಾರ್, ತಡರಾತ್ರಿ 11.45ರ ವೇಳೆಗೆ ರಸ್ತೆಗುಂಡಿಗಳ ಮುಚ್ಚಿರುವುದರ ಪರಿಶೀಲನೆಗೆ ನೈಟ್ ರೌಂಡ್ಸ್ ಕೈಗೊಂಡರು. ಮೊದಲಿಗೆ ಜಯಮಹಲ್ ರಸ್ತೆಗೆ ವಿಸಿಟ್ ಕೊಟ್ಟ ಡಿಕೆಶಿ, ಕೈಯಲ್ಲಿ ಹಾರೆ ಹಿಡಿದು ಅಗೆದು, ಕಾಲಲ್ಲಿ ಕೆರೆದು ಕಾಮಗಾರಿ ಪರಿಶೀಲನೆ ನಡೆಸಿದರು. ಇಷ್ಟಕ್ಕೆ ಸುಮ್ಮನಾಗದ ಡಿಸಿಎಂ, ಜೊತೆಯಲ್ಲಿ ಬಂದಿದ್ದವರ ಕೈಯಲ್ಲೂ ಹಾರೆಯಿಂದ ಅಗೆಸಿದರು. ಈ ವೇಳೆ ಎನ್ಎ.ಹ್ಯಾರಿಸ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಉಪಸ್ಥಿತರಿದ್ದರು.
4 / 8
ಜಯಮಹಲ್ ರಸ್ತೆಯಿಂದ ಮಹಾತ್ಮ ಗಾಂಧಿ ರಸ್ತೆ ಮಾರ್ಗವಾಗಿ ಮಧ್ಯರಾತ್ರಿ 12.17ಕ್ಕೆ ಟ್ರಿನಿಟಿ ಜಂಕ್ಷನ್ಗೆ ಡಿಸಿಎಂ ಆಗಮಿಸಿದ್ರು. ಅಲ್ಲಿಯೂ ಸ್ವತಃ ಕೈಯಲ್ಲಿ ಕೆರೆದು ಗುಂಡಿ ಮುಚ್ಚಿರೋದನ್ನ ಪರಿಶೀಲನೆ ನಡೆಸಿದರು.
5 / 8
ಟ್ರಿನಿಟಿ ಜಂಕ್ಷನ್ ಬಳಿಕ ಡಿಕೆ ಶಿವಕುಮಾರ್ ನೇರವಾಗಿ ದೊಮ್ಮಲೂರು ಫ್ಲೈಓವರ್ ಬಳಿಗೆ ಮಧ್ಯರಾತ್ರಿ 12.35ಕ್ಕೆ ಆಗಮಿಸಿದರು. ದೊಮ್ಮಲೂರು ಫ್ಲೈ ಓವರ್ ಸುತ್ತಮುತ್ತ ಗುಂಡಿಗಳನ್ನು ಮುಚ್ಚಿರುವುದನ್ನು ಖುದ್ದು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ವಿವರಣೆ ಪಡೆದರು.
6 / 8
ದೊಮ್ಮಲೂರು ಫ್ಲೈ ಓವರ್ನಿಂದ ನೀಲಸಂದ್ರಕ್ಕೆ ಎಂಟ್ರಿ ಕೊಟ್ಟ ಡಿಕೆಶಿ, ಅಲ್ಲೂ ಹಾರೆಯಿಂದ ಅಗೆದು ಕಾಮಗಾರಿಯ ಗುಣಮಟ್ಟ ಚೆಕ್ ಮಾಡಿದರು. ಬಳಿಕ ಮದರ್ ತೆರೇಸಾ ಸರ್ಕಲ್ನಲ್ಲಿ ಲಘು ಉಪಾಹಾರ ಸೇವಿಸಿ, ಮುಂದೆ ಸಾಗಿದರು.
7 / 8
ಲಘು ಉಪಾಹಾರ ಸೇವಿಸಿದ ಡಿಸಿಎಂ ಡಿಕೆ, ನೇರವಾಗಿ ಲಾಲ್ ಬಾಗ್ ವೆಸ್ಟ್ ಗೇಟ್ ಬಳಿ ಆಗಮಿಸಿ ಗುಂಡಿ ಮುಚ್ಚಿರೋದನ್ನ ಪರಿಶೀಲನೆ ನಡೆಸಿದರು. ಬಳಿಕ ಸೌತ್ ಎಂಡ್ ಸರ್ಕಲ್, ಜಯನಗರ ಹಾಗೂ ಬನಶಂಕರಿ ರಸ್ತೆಗಳಲ್ಲಿ ಗುಂಡಿ ಮುಚ್ಚಿರೋದನ್ನ ಖುದ್ದು ಪರಿಶೀಲನೆ ನಡೆಸಿದರು.
8 / 8
ಇಷ್ಟಕ್ಕೆ ಸುಮ್ಮನಾಗದ ಡಿಸಿಎಂ ಡಿಕೆ ಶಿವಕುಮಾರ್, ವರದಿಯನ್ನ ಹಿಡಿದುಕೊಂಡು ಬೈಕ್ನಲ್ಲಿ ಹೋಗಿ ಪರಿಶೀಲನೆ ಮಾಡ್ತೇನೆ ಎಂದಿದ್ದಾರೆ. ಒಟ್ಟಿನಲ್ಲಿ ಟಿವಿ9 ನಿರಂತರ ವರದಿ ಬೆನ್ನಲ್ಲೇ ಬೆಂಗಳೂರಿಗೆ ರಸ್ತೆ ಗುಂಡಿಗಳಿಗೆ ಮುಕ್ತಿ ಕೊಡಲು ಡಿಸಿಎಂ ಗಂಭೀರವಾಗಿ ಪರಿಗಣಿಸಿದ್ದಾರೆ, ಕಾಮಗಾರಿಯನ್ನು ರಾತ್ರೋರಾತ್ರಿ ಖದ್ದು ಪರಿಶೀಲಿಸಿದ್ದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.