ಕಳೆದ ಮೂರು ದಿನಗಳಿಂದ ಕರ್ನಾಟಕ ವಿಶ್ವವಿದ್ಯಾಲಯದ ಹಸಿರು ಉದ್ಯಾನವನ ಯುವ ಕಲಾವಿದರ ಸಂಗಮವಾಗಿತ್ತು. 26ನೇ ರಾಷ್ಟ್ರೀಯ ಯುವಜನ ಮೇಳದಲ್ಲಿ ಮಣ್ಣಿನಲ್ಲಿ ಮೇಕ್ ಇನ್ ಇಂಡಿಯಾ ಮೂಡಿ ಬಂದರೆ, ಚಿತ್ರಕಲೆಯಲ್ಲಿ ಭವಿಷ್ಯದ ಭಾರತ ಗೋಚರವಾಗಿತ್ತು. ಭಾರತ @ 2047 ಪರಿಕಲ್ಪನೆ ಆಧಾರದ ಮೇಲೆ ಯುವ ಚಿತ್ರಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಮೂರು ದಿನಗಳ ಕಾಲ ಮೂರು ಹಂತದಲ್ಲಿ ನಡೆದ ಸ್ಪರ್ಧೆಯಲ್ಲಿ ಎರಡು ದಿನ ಫ್ರಿ ಹ್ಯಾಂಡ್ ಹಾಗೂ ಒಂದು ದಿನ ಪರಿಕಲ್ಪನೆ ಆಧಾರಿತವಾಗಿ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಮೆಟ್ರೊ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದ ಮುಂದುವರಿಕೆ, ವಿಶ್ವಗುರು ಭಾರತ, ಗ್ರೀನ್ ಇಂಡಿಯಾ, ಡಿಜಿಟಲ್ ಇಂಡಿಯಾದಂತಹ ಪರಿಕಲ್ಪನೆಗಳು ದೃಶ್ಯಕಲೆಯ ಮೂಲಕ ಅನಾವರಣಗೊಂಡವು.
ಮೇಕ್ ಇನ್ ಇಂಡಿಯಾದ ಲಾಂಛನವಾದ ಸಿಂಹ, ವಿಜ್ಞಾನ ಮತ್ತು ತಂತ್ರಜ್ಞಾನ, ಕಲೆ, ಕ್ರೀಡೆ, ಭಾರತದ ಭೂಪಟ, ಬುದ್ಧ, ನರೇಂದ್ರ ಮೋದಿ ಅವರ ಮುಖ ಮುಂತಾದವುಗಳು ಕಲಾವಿದರ ಪರಿಕಲ್ಪನೆಗಳಾಗಿ ಹೊರಹೊಮ್ಮಿದವು. ಈ ಕಲಾವಿದರು ತಮ್ಮ ಮನದಾಳದಲ್ಲಿ ಮೂಡುವ ಕಲ್ಪನೆಗಳಿಗೆ ಜೀವ ತುಂಬುವ ಕಾರ್ಯದಲ್ಲಿ ಉತ್ಸುಕತೆಯಿಂದ ಮಗ್ನರಾಗಿರುವುದು ನೋಡುವವರಲ್ಲಿಯೂ ಸಹ ಉತ್ಸಾಹ ತುಂಬುವಂತಿತ್ತು.
ವಿಶಾಲವಾದ ಹಸಿರು ಹುಲ್ಲಿನ ಹಾಸಿಗೆಯ ಮೇಲೆ ನಿಂತ ಕಲಾವಿದರಿಂದ ನಿರ್ಮಾಣವಾದ ಮಣ್ಣಿನ ಕಲಾಕೃತಿಗಳಂತೂ ನೋಡುಗರನ್ನು ಕೈ ಮಾಡಿ ಕರೆಯುತ್ತಿದ್ದವು. ದೇಶದ ವಿವಿಧ ರಾಜ್ಯಗಳ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಕಲಾವಿದರು ಈ ಸ್ಪರ್ಧೆಗಳಲ್ಲಿ ತಮ್ಮ ಕೈಚಳಕ ಪ್ರದರ್ಶಿಸಿದರು. ಮಣ್ಣಿನ ಕಲಾಕೃತಿಗಾಗಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ನೀಡಲಾಗಿದ್ದು, ಕಲಾವಿದರಿಗೆ ಮೂರು ದಿನಗಳ ಸಮಯಾವಕಾಶ ನೀಡಲಾಗಿತ್ತು.
ಇನ್ನು ಛಾಯಾಚಿತ್ರಗಾರರಿಗೆ ಪೂರ್ತಿ ಯುವಜನೋತ್ಸವದ ಕಾರ್ಯಕ್ರಮಗಳನ್ನೇ ವಿಷಯವಾಗಿ ನೀಡಲಾಗಿತ್ತು. ಎಲ್ಲ ಛಾಯಾಗ್ರಾಹಕರು ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಯುವ ಕಲಾವಿದರ ಶಿಬಿರ ಕೇವಲ ಯುವಜನೋತ್ಸವದ ಸ್ಪರ್ಧಾಳುಗಳಿಗೆ ಮಾತ್ರವಲ್ಲದೇ ಇದೇ ಮೊದಲ ಬಾರಿಗೆ ಸ್ಥಳೀಯ ಕಲಾವಿದರಿಗೂ ತಮ್ಮ ಕಲಾಪ್ರತಿಭೆ ಪ್ರದರ್ಶಿಸಲು ವೇದಿಕೆ ಒದಗಿಸಿದ್ದು ವಿಶೇಷ. ಅನ್ಯ ರಾಜ್ಯಗಳ 108 ಕಲಾವಿದರು ಹಾಗೂ ಸ್ಥಳೀಯ 130ಕ್ಕೂ ಅಧಿಕ ಕಲಾವಿದರು ಚಿತ್ರಕಲೆ, ಮಣ್ಣಿನ ಕಲಾಕೃತಿ ಹಾಗೂ ಫೋಟೋಗ್ರಫಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. (ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ)
Published On - 6:43 pm, Sun, 15 January 23