ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆ ದಸರಾಗೆ ಆಗಮಿಸುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮೇಯರ್ ಶಿವಕುಮಾರ್ ಮತ್ತು ಡಿಸಿ ಡಾ.ರಾಜೇಂದ್ರರಿಂದ ಹಲವು ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.
ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪನವರ ನೇತೃತ್ವದ ಜಿಲ್ಲಾಡಳಿತದ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಮೈಸೂರು ದಸರಾ ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದ್ದಾರೆ.
ಮೈಸೂರು ದಸರಾ ಉದ್ಘಾಟಕ ನಾದಬ್ರಹ್ಮ ಹಂಸಲೇಖ ಅವರಿಗೆ ಮೈಸೂರು ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ ಪತ್ರಿಕೆ ನೀಡಲಾಗಿದೆ. ಮೈಸೂರು ಪೇಟ ತೊಡಿಸಿ ದಸರಾ ಜಂಬೂಸವಾರಿ ಮರದ ಆನೆ ನೀಡುವ ಮೂಲಕ ಮೈಸೂರು ಜಿಲ್ಲಾಡಳಿತ ದಸರಾಗೆ ಆಹ್ವಾನ ನೀಡಿದೆ.
ಮೈಸೂರು ದಸರಾ ಉದ್ಘಾಟನೆ ಆಗಮಿಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಮೈಸೂರು ಪೊಲೀಸ್ ಆಯುಕ್ತ ಶ್ರೀ ಬಿ. ರಮೇಶ್ ಅವರು ಆಹ್ವಾನ ನೀಡಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಹಿತಿ ನೀಡಿರುವ ಡಿಕೆ ಶಿವಕುಮಾರ್, ಮೈಸೂರು ದಸರಾ ಎಂದರೆ ಕರ್ನಾಟಕದ ಸಂಸ್ಕೃತಿಯ ಸಮಾಗಮ. ನಾಡ ದೇವತೆ, ಬೆಟ್ಟದ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯನ್ನು ಆರಾಧಿಸುವ ಸುಸಂದರ್ಭ. ಚಿಕ್ಕಂದಿನಲ್ಲಿ ಕುಟುಂಬದವರ ಜೊತೆ ನೋಡಿದ ದಸರಾ ಕಣ್ಣ ಮುಂದಿದೆ. ಇಂದು ಅದೇ ಮೈಸೂರು ದಸರಾ ಉದ್ಘಾಟನೆಗೆ ಬರುವಂತೆ ಆಹ್ವಾನಿಸಿದ್ದಾರೆ. ಇದು ಒಂದು ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ.
ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರನ್ನು ಭೇಟಿ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮೇಯರ್ ಶಿವಕುಮಾರ್ ಮತ್ತು ಡಿಸಿ ಡಾ.ರಾಜೇಂದ್ರರಿಂದ ಮೈಸೂರು ದಸರಾಗೆ ಅಧಿಕೃತ ಆಹ್ವಾನ ನೀಡಲಾಗಿದೆ.
Published On - 9:48 pm, Wed, 11 October 23