- Kannada News Photo gallery EPF updates, know how many years it take to build Rs 1 crore corpus, news in Kannada
30,000 ರೂ ಸಂಬಳ ಪಡೆಯುತ್ತಿರುವವರು ಇಪಿಎಫ್ನಲ್ಲಿ 1 ಕೋಟಿ ಕೂಡಿಡಲು ಎಷ್ಟು ವರ್ಷ ಬೇಕು?
EPF info: ಬಹುತೇಕ ಉದ್ಯೋಗಿಗಳಿಗೆ ಇಪಿಎಫ್ ಸೌಲಭ್ಯ ಇರುತ್ತದೆ. ನಿವೃತ್ತಿ ಆಗುವವರೆಗೂ ಒಬ್ಬ ಉದ್ಯೋಗಿ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯದೇ ಇದ್ದರೆ ಅವರ ಪಿಎಫ್ ಅಕೌಂಟ್ನಲ್ಲಿ ಎಷ್ಟು ಹಣ ಇರಬಹುದು? ಒಂದು ಕೋಟಿ ರೂ ಹಣ ಜಮೆ ಆಗಲು ಎಷ್ಟು ವರ್ಷ ಬೇಕಾಗಬಹುದು? ಇಲ್ಲಿದೆ ಲೆಕ್ಕಾಚಾರ.
Updated on: Aug 21, 2024 | 2:46 PM

ಎಂಪ್ಲಾಯೀ ಪ್ರಾವಿಡೆಂಟ್ ಫಂಡ್ ಎಂಬುದು ಉದ್ಯೋಗಿಗಳ ಭವಿಷ್ಯದ ಭದ್ರತೆಗೆಂದು ಸರ್ಕಾರ ರೂಪಿಸಿರುವ ಯೋಜನೆ. ಇಪಿಎಫ್ನಲ್ಲಿ ಉದ್ಯೋಗಿಯ ಸಂಬಳದ ನಿರ್ದಿಷ್ಟ ಭಾಗ, ಸಂಸ್ಥೆಯಿಂದ ಅಷ್ಟೇ ಮೊತ್ತದ ಹಣ, ಹಾಗೂ ಸರ್ಕಾರದಿಂದ ಬಡ್ಡಿಹಣ ಜಮೆ ಆಗುತ್ತಿರುತ್ತದೆ. ಈ ಮೂಲಕ ಪ್ರಾವಿಡೆಂಟ್ ಫಂಡ್ ಖಾತೆಯಲ್ಲಿ ಹಣ ಬೆಳೆಯುತ್ತಾ ಹೋಗಿ ಅಂತಿಮವಾಗಿ ದೊಡ್ಡ ಮೊತ್ತ ಕೂಡುತ್ತದೆ.

ಉದ್ಯೋಗಿಗಳು ಕೆಲಸ ಬದಲಿಸಿದಾಗ ಪ್ರತ್ಯೇಕ ಇಪಿಎಫ್ ಅಕೌಂಟ್ ರಚನೆ ಮಾಡಲಾಗುತ್ತದೆ. ಆದರೆ, ಹಿಂದಿನ ಖಾತೆಯನ್ನು ಹೊಸ ಖಾತೆಯೊಂದಿಗೆ ವಿಲೀನ ಮಾಡಿಕೊಳ್ಳಬಹುದು. ಇದರೊಂದಿಗೆ ಒಂದೇ ಇಪಿಎಫ್ ಖಾತೆ ಇರುವಂತೆ ನೋಡಿಕೊಳ್ಳಬಹುದು.

ಬೇರೆ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ ಪ್ರಾವಿಡೆಂಟ್ ಫಂಡ್ ಹಣಕ್ಕೆ ಸರ್ಕಾರದಿಂದ ಹೆಚ್ಚು ಬಡ್ಡಿ ಸಿಗುತ್ತದೆ. ಸದ್ಯಕ್ಕೆ ಪಿಎಫ್ ಹಣಕ್ಕೆ ಶೇ. 8.25ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಬೇರೆ ಸ್ಮಾಲ್ ಸೇವಿಂಗ್ಸ್ ಸ್ಕೀಮ್ಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ಗರಿಷ್ಠ ಶೇ. 8.15ರಷ್ಟು ಬಡ್ಡಿ ನೀಡಲಾಗುತ್ತಿದೆ. ಇವುಗಳಿಗಿಂತ ಇಪಿಎಫ್ ಹಣಕ್ಕೆ ಹೆಚ್ಚು ಬಡ್ಡಿ.

ಈಗ ಒಬ್ಬ ಉದ್ಯೋಗಿಯ ಇಪಿಎಫ್ ಖಾತೆಗೆ ಒಂದು ಕೋಟಿ ರೂ ಜಮೆ ಆಗಲು ಎಷ್ಟು ವರ್ಷ ಬೇಕು ಎಂದು ಅಂದಾಜು ಲೆಕ್ಕ ಹಾಕೋಣ. ಇಪಿಎಫ್ಒ ನಿಯಮ ಪ್ರಕಾರ ಉದ್ಯೋಗಿಯ ಮೂಲ ವೇತನ ಮತ್ತು ಡಿಎ ಎರಡೂ ಸೇರಿದ ಮೊತ್ತದ ಶೇ. 12ರಷ್ಟು ಹಣವನ್ನು ಮುರಿದುಕೊಂಡು ಪ್ರತೀ ತಿಂಗಳು ಅವರ ಇಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಸಂಸ್ಥೆಗಳೂ ಕೂಡ ಶೇ. 12ರಷ್ಟು ಕೊಡುಗೆ ನೀಡುತ್ತವೆ. ಇದರಲ್ಲಿ ಶೇ. 8.33ರಷ್ಟು ಹಣ ಪೆನ್ಷನ್ ಫಂಡ್ಗೆ ಹೋದರೆ, ಉಳಿದ ಹಣ ಇಪಿಎಫ್ ಖಾತೆಗೆ ಜಮೆ ಆಗುತ್ತದೆ. ಉದ್ಯೋಗಿಗಳು ತಮ್ಮ ಸಂಬಳ ಮತ್ತು ಡಿಎನ ಎರಡು ಪಟ್ಟು ಹಣವನ್ನು ಇಪಿಎಫ್ ಖಾತೆಗೆ ವರ್ಗಾವಣೆ ಮಾಡಿಸುವ ಅವಕಾಶ ಇರುತ್ತದೆ.

ಉದ್ಯೋಗಿಯ ಸಂಬಳ 30,000 ರೂ ಇದ್ದು, ಅವರ ಮೂಲವೇತನ 15,000 ರೂ ಆಗಿದೆ ಎಂದಿಟ್ಟುಕೊಳ್ಳಿ. ಇವರ ಇಪಿಎಫ್ ಖಾತೆಗೆ ಪ್ರತೀ ತಿಂಗಳು 2,300 ರೂ ಜಮೆ ಆಗಬಹುದು. ಪ್ರತೀ ವರ್ಷ ಶೇ. 10ರಷ್ಟು ಸಂಬಳ ಹೆಚ್ಚಳ ಪರಿಗಣಿಸುತ್ತಾ ಲೆಕ್ಕ ಹಾಕಿದರೆ ಒಂದು ಕೋಟಿ ರೂ ಜಮೆ ಆಗಲು 30 ವರ್ಷ ಬೇಕಾಗುತ್ತದೆ. 25 ವರ್ಷದ ಉದ್ಯೋಗಿಯ ವಯಸ್ಸು 55 ವರ್ಷ ಆದಾಗ ಆತನ ಇಪಿಎಫ್ ಖಾತೆಯಲ್ಲಿ 1 ಕೋಟಿ ರೂ ಸೇರಬಹುದು.

ಒಂದು ವೇಳೆ, ವಾಲಂಟ್ರಿಯಾಗಿ ಹೆಚ್ಚುವರಿ ಪಿಎಫ್ ಕೊಡುಗೆ ನೀಡಿದಲ್ಲಿ ಉದ್ಯೋಗಿಯ ಇಪಿಎಫ್ ಖಾತೆಗೆ ಇನ್ನೂ ಹೆಚ್ಚು ಹಣ ಸೇರಬಹುದು.









