ಲೋಕಸಭೆ ಚುನಾವಣೆ ಸಮೀಪವಾಗುತ್ತಿದೆ, ಮೂರನೇಬಾರಿಗೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯೋಕೆ ಭರ್ಜರಿ ತಯಾರಿಮಾಡಿರೊ ಬಿಜೆಪಿ ಮೊದಲಪಟ್ಟಿಯನ್ನೂ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಜೆಡಿಎಸ್ ಜೊತೆ ಚುನಾವಣಾ ಪೂರ್ವ ಮೈತ್ರಿಜೊತೆಗೆ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಅಖಾಡಕ್ಕಿಳಿದಿರೊ ಮೈತ್ರಿ ಟೀಂ ರಣತಂತ್ರ ಹೆಣೆಯುತ್ತಿದ್ದರೆ, ವಿಧಾನಸಭೆ ಚುನಾವಣೆಯಲ್ಲಾದ ಸೋಲಿನಿಂದ ಮೇಲೆದ್ದು ಬರಲು ತಯಾರಾಗಿರೊ ದಳಪತಿಗಳು ಚುನಾವಣೆ ಹೊಸ್ತಿಲಲ್ಲಿ ಭರ್ಜರಿ ಪೂಜೆ ಮೂಲಕ ತಯಾರಿ ಆರಂಭಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಹುಟ್ಟೂರು ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಸಮೀಪದ (Haradanahalli in Hassan) ಮಾವಿನಕೆರೆ ಬೆಟ್ಟದಲ್ಲಿ (Mavinakere Ranganatha Swamy) ಮೂರು ದಿನಗಳ ಸತತ ಪೂಜೆ ಪುನಸ್ಕಾರ ನಡೆಸಿದ ದೊಡ್ಡಗೌಡರ ಫ್ಯಾಮಿಲಿ ಸಾವಿರದ ಒಂದು ಕುಂಬಾಭಿಷೇಕ ನೆರವೇರಿಸಿದ್ರು. ಪೂಜೆ ಹೋಮ ಹವನಕ್ಕೆ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು. ಪ್ರಮುಖ ನಾಯಕರು, ಕಾರ್ಯಕರ್ತರ ಸಮ್ಮುಖದಲ್ಲಿ ಭರ್ಜರಿ ಪೂಜೆ ನಡೆಸಿದ ದೊಡ್ಡಗೌಡರು ಲೋಕ ಅಖಾಡಕ್ಕೆ ದೈವದ ಆಶೀರ್ವಾದ ಪಡೆದರು.
ಚುನಾವಣೆ ಹೊಸ್ತಿಲಲ್ಲಿ ದೊಡ್ಡಗೌಡರಿಂದ ಸಾವಿರದೊಂದು ಕುಂಭಾಭಿಷೇಕ, ಮೂರು ದಿನಗಳಿಂದ ದಿನವಿಡೀ ದೈವಕ್ಕೆ ಮೊರೆಹೋದ ಮಾಜಿ ಪ್ರದಾನಿ, ಕೊನೆಯ ದಿನ ಕುಟುಂಬ ಸದಸ್ಯರು, ಕಾರ್ಯಕರ್ತರು ನಾಯಕರು ಸಾಥ್, ಲೋಕಸಭಾ ಚುನಾವಣೆ ಗೆಲ್ಲಲು ದೈವ ಬಲಕ್ಕೆ ಮೊರೆಹೋದ್ರಾ ದೊಡ್ಡಗೌಡರು,
ಹೌದು ರಾಜ್ಯದಲ್ಲಿ ಬಿಜೆಪಿ ಜೊತೆಗೆ ಮೈತ್ರಿಮಾಡಿಕೊಂಡು ಮೊದಲಬಾರಿಗೆ ಚುನಾವಣೆ ಎದುರಿಸಲು ಸಜ್ಜಾಗಿರೊ ದಳಪತಿಗಳಿಗೆ ಎಷ್ಟು ಸ್ಥಾನ ಸಿಗಲಿದೆ ಎನ್ನೋದು ಇನ್ನು ಅಂತಿಮವಾಗದಿದ್ದರೂ ಜೆಡಿಎಸ್ ಭದ್ರಕೋಟೆ ದೊಡ್ಡಗೌಡರ ತವರು ಹಾಸನ, ಜೆಡಿಎಸ್ ಬಲಿಷ್ಟವಾಗಿರೊ ಮಂಡ್ಯ ಸೇರಿ ನಾಲ್ಕರಿಂದ ಐದು ಕ್ಷೇತ್ರ ಜೆಡಿಎಸ್ ಗೆ ಸಿಗಲಿದೆ ಎನ್ನೋ ಚರ್ಚೆ ಇದ್ದರೂ ಕೂಡ ಅದು ಅಂತಿಮವಾಗಿಲ್ಲ, ಇದರ ನಡುವೆ ಚುನಾವಣೆ ಸಮೀಪದಲ್ಲಿ ಮಾಜಿ ಪ್ರದಾನಿ ದೇವೇಗೌಡರು ತಮ್ಮ ಕುಟುಂಬ 80 ವರ್ಷಗಳ ಹಿಂದೆ ಮಾಡಿಸಿದ್ದ ಸಾವಿರದ ಒಂದು ಕುಂಭಗಳ ಕಳಷಾಭಿಷೇಕ ನೆರವೇರಿಸಿದ್ದಾರೆ.
ಮಾರ್ಚ್ 1ರಿಂದ ಆರಂಭಗೊಂಡ ಪೂಜೆಯಲ್ಲಿ ಪತ್ನಿ ಸಮೇತವಾಗಿ ಇಡೀ ದಿನ ಪೂಜೆ ನೆರವೇರಿಸಿದ ಗೌಡರು ತಮ್ಮ ಅರೋಗ್ಯ ವೃದ್ದಿಸಿದ, ತಮ್ಮ ರಾಜಕೀಯ ಏಳಿಗೆಗೆ ಆಶೀರ್ವಾದ ಮಾಡಿದ ಹುಟ್ಟೂರು ಹೊಳೆನರಸೀಫುರ ತಾಲ್ಲೂಕಿನ ಹರದನಹಳ್ಳಿಯ ಸಮೀಪದಲ್ಲಿ ಬೆಟ್ಟದ ಮೇಲೆ ನೆಲೆಸಿರೊ ಮಾವಿನಕೆರೆಯ ಬೆಟ್ಟದ ರಂಗನಾಥಸ್ವಾಮಿಗೆ ಪೂಜೆ ಸಲ್ಲಿಸಿದ್ರು, ಇದರ ಹಿಂದೆ ಯಾವುದೇ ರಾಜಕೀಯ ಇಲ್ಲಾ ಎಂದು ಹೇಳುತ್ತಲೆ ಮುಂದಿನ ಲೋಕಸಮರ ಎದುರಿಸೋಕೆ ದೈವ ಬಲದ ಆಶೀರ್ವಾದ ಕೇಳಿದ್ದಾರೆ.
ತಮ್ಮ ಪುತ್ರ ಮಾಜಿ ಸಚಿವ ಎಚ್ಡಿ ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಡಾ ಸೂರಜ್ ರೇವಣ್ಣ ಸೇರಿ ಇಡೀ ಕುಟುಂಬ ಸದಸ್ಯರು ಭಾಗಿಯಾಗಿ ಸಾವಿರ ಕುಂಬಗಳ ಕಳಸ ಅಭಿಷೇಕ ನೆರವೇರಿಸಿದ್ರು, ದೇವೇಗೌಡರ ಹರಕೆಯಂತೆ ಪೂಜೆ ನೆರವೇರಿದೆ ಎಂದು ಪ್ರಜ್ವಲ್ ರೇವಣ್ಣ-ಸಂಸದರು ತಿಳಿಸಿದರು.
ತಮ್ಮ ಪುತ್ರರು, ಪುತ್ರಿಯರ ಜೊತೆಗೆ ಪೂಜೆಯಲ್ಲಿ ಭಾಗಿಯಾಗಿದದ್ದ ಮಾಜಿ ಪ್ರಧಾನಿ ದೇವೇಗೌಡರು ಇಡೀ ದಿನ ಉಪವಾಸವಿದ್ದು ತಮ್ಮ ಸಂಕಲ್ಪ ಪೂಜೆ ನೆರೆವೇರಿಸಿದ್ದಾರೆ, 80 ವರ್ಷಗಳ ಬಳಿಕ ನಡೆದ ಈ ವಿಶೇಷ ಪೂಜೆ ನೆರವೇರಿಸಲು ಒಂದು ತಿಂಗಳಿನಿಂದ ತಯಾರಿ ನಡೆದಿತ್ತು, ತಮ್ಮ ಆಪ್ತರ ಮೂಲಕ ಬೃಹತ್ ಪೂಜೆಯನ್ನ ದೇವೇಗೌಡರು ನೆರವೇರಿಸಿದರು.
ಇದಕ್ಕಾಗಿ ಒಂದುಸಾವಿರದ ಒಂದು ಕುಂಭಗಳು, ಮೂರು ಸಾಗರದ ನೀರು, ಏಳು ನದಿಗಳ ನೀರು, ಏಳು ಪರ್ವತಗಳ ಮಣ್ಣು, ಮೂರು ಸಮುದ್ರಗಳ ಮಣ್ಣೂ ಹೀಗೆ ಸಾವಿರಾರು ಪೂಜಾ ಸಾಮಗ್ರಿ ದ್ರವ್ಯಗಳೊಂದಿಗೆ ಕುಂಭಗಳ ಸಿದ್ದಗೊಳಿಸಿ ಪೂಜೆಯಲ್ಲಿ ಸಾವಿರ ಕುಂಬಗಳ ಕಳಶ ಅಭಿಷೇಕ ನೆರವೇರಿತು,
ಇದಕ್ಕಾಗಿ ಹಾಸನ ಮಾತ್ರವಲ್ಲದೆ ಮಂಡ್ಯ, ಮೈಸೂರು ಸೇರಿ ರಾಜ್ಯದ ವಿವಿಧೆಡೆಗಳಿಂದ ಪ್ರಸಿದ್ದ ಆಗಮ ಪಂಡಿತರು, ಅರ್ಚಕರ 51 ಜನರ ತಂಡ ಮೂರು ದಿನಗಳಿಂದ ಪೂಜೆ ಹೋಮ ಹವನ ನೆರವೇರಿಸಿದರು. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಆಗಮ ಪಂಡಿತರಾದ ಶ್ರೀ ವಿಜಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಪೂಜೆಯಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡಲಾಗಿದೆ ಎಂದು ಅರ್ಚಕರು ಮಾಹಿತಿ ನೀಡಿದರು.
12 ವರ್ಷಗಳಿಗೊಮ್ಮೆ ದೇಗುಲಗಳ ಕಳಸ ಪುನರ್ ಪ್ರತಿಷ್ಠಾ ಪೂಜೆ ಮಾಡಿಸಬೇಕು, ಈ ದೇಗುಲದಲ್ಲಿ 12 ಆದ ಬಳಿಕ ಕೋವಿಡ್ ಬಂದ ಕಾರಣ ಆಗಿರಲಿಲ್ಲ, ದೇವೇಗೌಡರ ಸಂಕಲ್ಪದಂತೆ ಪೂಜೆ ನೆರವೇರಿದೆ, ಇದರ ಪೂಜಾ ಫಲ ಎಲ್ಲರಿಗೂ ಸಿಗಲಿದೆ ಎಂದು ವಿಜಯ್ ಕುಮಾರ್- ಹಿರಿಯ ಆಗಮ ಪಂಡಿತರು ಹೇಳಿದರು.
ಒಟ್ನಲ್ಲಿ ಲೋಕಸಭೆ ಚುನಾವಣೆ ಮತ್ತೆ ಉತ್ಸಾಹದಿಂದ ಅಖಾಡಕ್ಕಿಳಿಯಲು ಸಜ್ಜಾಗಿರೊ ದೊಡ್ಡಗೌಡರು ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಕರುನಾಡನ್ನ ಗೆದ್ದುಬೀಗೋಕೆ ರಣತಂತ್ರ ಹೆಣೆಯುತ್ತಲೆ ತಮ್ಮ ರಾಜಕೀಯ ಜೀವನದುದ್ದಕ್ಕೂ ಸದಾ ಶ್ರೇಯಸ್ಸು ಕರುಣಿಸುತ್ತಿರುವ ಇಷ್ಟದೇವ ರಂಗನಾಥನಿಗೆ ಮೊರೆಯಿಟ್ಟು ವಿಶೇಷ ಪೂಜೆ ಸಲ್ಲಿಸಿ ದೈವ ಬಲದೊಂದಿಗೆ ಚುನಾವಣೆಗೆ ಸಜ್ಜಾಗಿದ್ದಾರೆ.