
ನಾಡಿನೆಲ್ಲೆಡೆ ನಿನ್ನೆಯಿಂದ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ, ಮುಂಗಾರು ಮುಗಿದು ಎಲ್ಲೆಡೆ ಉತ್ತಮ ಮಳೆಯಿಂದ ಸಂಭ್ರಮ ಮತ್ತಷ್ಟು ಇಮ್ಮಡಿಯಾಗಿದೆ. ಜೊತೆಗೆ ಎಲ್ಲೆಡೆ ವಿಧವಿಧದ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ, ಇಲ್ಲೊಂದು ವಿಶೇಷ ಎಂಬಂತೆ ಅಯೋಧ್ಯೆ ರಾಮನ ರೂಪದ ಗಣೇಶನ ಜೊತೆ ಚಿತ್ರ ನಟ ಯಶ್ ಅವರು ಇರುವ ಮೂರ್ತಿಯನ್ನು ಇಡಲಾಗಿದೆ.

ಹೌದು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದಲ್ಲಿ ಅಯೋಧ್ಯೆ ರಾಮನ ರೂಪದ ಗಣೇಶನ ಜೊತೆ ಚಿತ್ರ ನಟ ಯಶ್ ಇರುವ ಮೂರ್ತಿಯನ್ನು ಇಡಲಾಗಿದೆ.

ಅವರ್ಸಾ ಗ್ರಾಮದ ಸಾರ್ವಜನಿಕ ಗಣೇಶೊತ್ಸವ ಸಮಿತಿಯಿಂದ ಚಿತ್ರ ನಟ ಯಶ್ ಅವರು ಗಣೇಶನ ದರ್ಶನ ಪಡೆಯುತ್ತಿರುವ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು, ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಪ್ರತಿ ವರ್ಷ ಗಣೇಶ ಮೂರ್ತಿ ಜೊತೆ ಒಂದಿಲ್ಲೊಂದು ವಿಶೇಷ ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ. ಕಳೆದ ವರ್ಷ ಪವರ್ ಸ್ಟಾರ್ ಪುನೀತ್ ರಾಜಕುಮಾರ ಮೂರ್ತಿ ನಿರ್ಮಾಣ ಮಾಡಲಾಗಿತ್ತು.

ಈ ವರ್ಷ ಅಯೋಧ್ಯಾ ರಾಮ ಲಲ್ಲಾ ರೂಪದ ಗಣಪನಿಗೆ ನಮಸ್ಕಾರ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಮೂರ್ತಿ ನಿರ್ಮಾಣ ಮಾಡಲಾಗಿದೆ.

ಥೇಟ್ ಅಯೋಧ್ಯಾ ರಾಮ ಮಂದಿರದ ರೀತಿಯಲ್ಲಿ ಸುತ್ತಲೂ ಗೊಡೆ ನಿರ್ಮಾಣ ಮಾಡಿದ್ದು, ನಿನ್ನೆಯಿಂದ ಈ ಗಣೇಶ ಬಹಳಷ್ಟು ಜನರನ್ನು ಆಕರ್ಷಿಸುತ್ತಿದ್ದಾನೆ. ಚಿತ್ರ ನಟರ ಅಭಿಮಾನಿಗಳೆ ಜಾಸ್ತಿ ಜನ ಈ ಸಮಿತಿಯಲ್ಲಿ ಇರುವುದರಿಂದ ಪ್ರತಿ ವರ್ಷ ಒಬ್ಬೊಬ್ಬ ಚಿತ್ರನಟರ ಮೂರ್ತಿ ನಿರ್ಮಾಣ ಮಾಡಲಾಗುತ್ತಿದೆ.
Published On - 4:32 pm, Sun, 8 September 24