
2019-20ರ ಬಜೆಟ್: ಮೋದಿ 3.0 ಸರ್ಕಾರದಲ್ಲಿ ಹಣಕಾಸು ಮಂತ್ರಿ ಹೊಣೆ ಪಡೆದ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಬಜೆಟ್ ಮಂಡನೆ. ಕುಂಠಿತ ಆರ್ಥಿಕ ಪ್ರಗತಿ, ಅಧಿಕ ನಿರುದ್ಯೋಗ, ಅನುಭೋಗದಲ್ಲಿ ಇಳಿಕೆ ಇತ್ಯಾದಿ ಆರ್ಥಿಕ ಸವಾಲುಗಳ ಸಂದರ್ಭದಲ್ಲಿ ಬಜೆಟ್ ರೂಪಿಸುವ ಸವಾಲು ಅವರದ್ದಾಗಿತ್ತು. ಬಂಡವಾಳ ಹಿಂತೆಗೆತ, ಅಧಿಕ ಟ್ಯಾಕ್ಸ್ ಸರ್ಚಾರ್ಜ್ ಇತ್ಯಾದಿ ಕ್ರಮಗಳಿಂದ ಆದಾಯ ಹೆಚ್ಚಳಕ್ಕೆ ಕ್ರಮ ತೆಗೆದುಕೊಂಡರು. ಮುಂದಿನ ಐದು ವರ್ಷಕ್ಕೆ ಹಲವು ಲಕ್ಷ ಕೋಟಿ ರೂಗಳ ಹೂಡಿಕೆ ಯೋಜನೆ ಪ್ರಕಟಿಸಿದರು. ಬಜೆಟ್ ಪತ್ರವನ್ನು ಸೂಟ್ಕೇಸ್ನಲ್ಲಿ ಕೊಂಡೊಯ್ಯುವ ಸಂಪ್ರದಾಯ ಮುರಿದು, ಸಾಂಪ್ರದಾಯಿಕ ಚೀಲದಲ್ಲಿ ಮುಂಗಡಪತ್ರ ಒಯ್ದರು.

2020-21ರ ಬಜೆಟ್: ತಮ್ಮ ಎರಡನೇ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಜನರ ಖರೀದಿ ಶಕ್ತಿ ಹೆಚ್ಚಿಸುವ ಗುರಿ ಇಟ್ಟಿದ್ದರು. ಹೆಲ್ತ್ಕೇರ್, ಸ್ವಚ್ಛ ಭಾರತ್ ಮಿಷನ್, ಮನೆಗಳಿಗೆ ಕೊಳವೆ ನೀರು ಇತ್ಯಾದಿ ಯೋಜನೆಗಳಿಗೆ ಹೇರಳ ಅನುದಾನ ಬಿಡುಗಡೆ ಮಾಡಿದರು.

2021-22ರ ಬಜೆಟ್: ಕೋವಿಡ್ನಿಂದ ಜರ್ಝರಿತಗೊಳ್ಳುತ್ತಿದ್ದ ಸಂದರ್ಭದಲ್ಲಿ ಮಂಡನೆಯಾದ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರೋಗ್ಯ ಕ್ಷೇತ್ರಕ್ಕೆ ಹೇರಳ ಹಣ ಮೀಸಲಿಟ್ಟರು. ಆರ್ಥಿಕತೆಗೆ ಚೇತರಿಕೆ ತುಂಬಲು ಹಲವು ಕ್ರಮ ಪ್ರಕಟಿಸಿದರು.

2022-23ರ ಬಜೆಟ್: ಕೋವಿಡ್ನಿಂದ ಅಧಃಪತನಕ್ಕೆ ಇಳಿದಿದ್ದ ಆರ್ಥಿಕತೆಗೆ ಚೇತರಿಕೆ ತುಂಬ ಪ್ರಯತ್ನ ಈ ಬಜೆಟ್ನಲ್ಲೂ ಮುಂದುವರಿಯಿತು. ಬಿಟ್ಕಾಯಿನ್ ಇತ್ಯಾದಿ ವರ್ಚುವಲ್ ಡಿಜಿಟಲ್ ಅಸೆಟ್ಗಳಿಗೆ ಶೇ. 30 ಇನ್ಕಮ್ ಟ್ಯಾಕ್ಸ್ ಹಾಕಿದರು. ಆ ವರ್ಷ ಸರ್ಕಾರಕ್ಕೆ 1.4 ಲಕ್ಷ ಕೋಟಿ ರೂ ಜಿಎಸ್ಟಿ ಸಂಗ್ರಹವಾಗಿ ಹೊಸ ದಾಖಲೆಯೇ ಎನಿಸಿತು. ಇನ್ಫ್ರಾಸ್ಟ್ರಕ್ಚರ್ಗೆ ಶಕ್ತಿ ತುಂಬಿದರು.

2023-24ರ ಬಜೆಟ್: ಕರ್ನಾಟಕದಿಂದ ರಾಜ್ಯಸಭಾ ಸಂಸದೆಯಾಗಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕದ ಖ್ಯಾತ ಇಳಕಲ್ ಸೀರೆ ತೊಟ್ಟು ಬಜೆಟ್ ಮಂಡಿಸಿದ್ದು ವಿಶೇಷ.

2024-25ರ ಮಧ್ಯಂತರ ಬಜೆಟ್: ಮೋದಿ 2.0 ಸರ್ಕಾರದ ಕೊನೆಯ ಬಜೆಟ್. ಚುನಾವಣೆ ಇದ್ದುದ್ದರಿಂದ 2024ರ ಫೆಬ್ರುವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಾಯಿತು. ನಿರ್ಮಲಾ ಸೀತಾರಾಮನ್ ಅವರ ಮೊದಲ ಮಧ್ಯಂತರ ಬಜೆಟ್ ಕೂಡ ಇದು.

2024-25ರ ಬಜೆಟ್: ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್ ಅವರು ಹಲವಾರು ಸ್ಕೀಮ್ಗಳನ್ನು ಪ್ರಕಟಿಸಿದರು. ಮೊಬೈಲ್ ಫೋನ್, ಚಿನ್ನ, ಬೆಳ್ಳಿ ಮೇಲೆ ಆಮದು ಸುಂಕ ಕಡಿಮೆ ಮಾಡಿದರು. ಲಿಥಿಯಮ್ ಇತ್ಯಾದಿ ಕ್ರಿಟಿಕಲ್ ಮಿನರಲ್ ಅಥವಾ ಅಮೂಲ್ಯ ಖನಿಜಗಳಿಗೆ ಸುಂಕ ವಿನಾಯಿತಿ ಘೋಷಿಸಿದರು. ಅಮೋನಿಯಂ ನೈಟ್ರೇಟ್, ಪ್ಲಾಸ್ಟಿಕ್ ಇತ್ಯಾದಿಗಳಿಗೆ ಸುಂಕ ಹೆಚ್ಚಿಸಿದರು. ಉದ್ಯೋಗ ಸೃಷ್ಟಿಗೆ ವಿವಿಧ ಸ್ಕೀಮ್ಗಳನ್ನು ಪ್ರಕಟಿಸಿ ಲಕ್ಷಾಂತರ ಕೋಟಿ ರೂ ಮೀಸಲಿಟ್ಟರು.

2025-26ರ ಬಜೆಟ್: ನಿರ್ಮಲಾ ಸೀತಾರಾಮನ್ ಅವರಿಗೆ ಇದು 8ನೇ ಬಜೆಟ್. ಆದಾಯ ತೆರಿಗೆ ಸ್ಲ್ಯಾಬ್ಗಳ ಇಳಿಕೆ ಸೇರಿದಂತೆ ಹಲವು ಗಮನಾರ್ಹ ಕ್ರಮಗಳನ್ನು ಬಜೆಟ್ನಲ್ಲಿ ಘೋಷಿಸಿದರು. ಜನರ ಕೈಗೆ ಹೆಚ್ಚು ಹಣ ಹರಿದಾಡಿ, ಈ ಮೂಲಕ ಆರ್ಥಿಕತೆಗೆ ಅನುಭೋಗದ ಶಕ್ತಿ ಹೆಚ್ಚಿಸಲು ಕ್ರಮ ತೆಗೆದುಕೊಂಡರು.