
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಗುರುತಿಸಿಕೊಂಡಿರುವ ರಂಜನಿ ರಾಘವನ್ ಹೆಸರು ಕೇಳದವರು ಕರ್ನಾಟಕದಲ್ಲಿ ವಿರಳ ಎಂದೇ ಹೇಳಬೇಕು! ಕಾರಣ, ‘ಪುಟ್ಟಗೌರಿ ಮದುವೆ’ ಮೂಲಕ ಮನೆಮಾತಾದ ನಟಿ ಈಗ ‘ಕನ್ನಡತಿ’ ಮೂಲಕ ಮನೆಮನಗಳಿಗೆ ಆಪ್ತರಾಗಿದ್ದಾರೆ.

‘ಕನ್ನಡತಿ’ ಧಾರವಾಹಿಯಲ್ಲಿ ಭುವನೇಶ್ವರಿಯಾಗಿ ಕಾಣಿಸಿಕೊಳ್ಳುತ್ತಿರುವ ರಂಜನಿ, ‘ಕನ್ನಡತಿ’, ‘ಭುವಿ’ ಎಂದೇ ಗುರುತಿಸಿಕೊಂಡು ಎಲ್ಲರ ಮನಗೆದ್ದವರು.

ಇಂದು ರಂಜನಿ ರಾಘವನ್ಗೆ ಹುಟ್ಟುಹಬ್ಬದ ಸಂಭ್ರಮ. 28ನೇ ವಸಂತಕ್ಕೆ ನಟಿ ಕಾಲಿಟ್ಟಿದ್ದು, ಅವರ ಅಪಾರ ಅಭಿಮಾನಿ ಬಳಗ ಶುಭಕೋರಿದೆ.

ಸಾಂಪ್ರದಾಯಿಕ ಲುಕ್ ಜತೆಜತೆಗೆ ಸಖತ್ ಗ್ಲಾಮರಸ್ ಆಗಿಯೂ ನಟಿ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ‘ಕನ್ನಡತಿ’ಯಲ್ಲಿ ಸಿಂಪಲ್ ಲುಕ್ನಲ್ಲಿ ಮಿಂಚುವ ರಂಜನಿ ಅವರ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ರಂಜನಿ ರಾಘವನ್ ಬೆಳ್ಳಿತೆರೆಯಲ್ಲೂ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಮೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿ ಬಣ್ಣಹಚ್ಚಿದ್ದಾರೆ. ಕೆಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದೆ.

ಇತ್ತೀಚೆಗೆ ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಟ್ರೇಲರ್ ರಿಲೀಸ್ ಆಗಿತ್ತು. ದಿಗಂತ್, ಐಂದ್ರಿತಾ ಜತೆಗೆ ರಂಜನಿ ಕೂಡ ಬಣ್ಣಹಚ್ಚಿದ್ದು, ಅವರ ಪಾತ್ರ ಕುತೂಹಲ ಮೂಡಿಸಿದೆ.

ರಂಜನಿ ಬತ್ತಳಿಕೆಗೆ ಇತ್ತೀಚೆಗೆ ಹೊಸ ಚಿತ್ರ ಸೇರ್ಪಡೆಯಾಗಿದೆ. ಇನ್ನೂ ಹೆಸರಿಡದ ಮಾಲಾಶ್ರೀ ಕಮ್ಬ್ಯಾಕ್ ಚಿತ್ರಕ್ಕೆ ರಂಜನಿ ಜತೆಯಾಗಿದ್ದಾರೆ.

ಕತೆಗಾರ್ತಿಯಾಗಿ, ನಟಿಯಾಗಿ ದಿನದಿಂದ ದಿನಕ್ಕೆ ಎಲ್ಲರ ಮನಗೆಲ್ಲುತ್ತಾ ಯಶಸ್ಸಿನ ಹಾದಿಯಲ್ಲಿರುವ ರಂಜನಿ ರಾಘವನ್ಗೆ ಜನ್ಮದಿನದ ಶುಭಾಶಯ..