- Kannada News Photo gallery Health Insurance, Term Insurance and other policies, know GST rates applied, details in Kannada
ಇನ್ಷೂರೆನ್ಸ್ ಪಾಲಿಸಿ ಮೇಲೆ ಎಷ್ಟಿದೆ ಜಿಎಸ್ಟಿ? ಹೆಲ್ತ್ ಇನ್ಷೂರೆನ್ಸ್, ಟರ್ಮ್ ಇನ್ಷೂರೆನ್ಸ್, ಯುಲಿಪ್ಗಳಿಗೆಷ್ಟು ತೆರಿಗೆ? ಇಲ್ಲಿದೆ ವಿವರ
GST on insurance policies: ಹೆಲ್ತ್ ಇನ್ಷೂರೆನ್ಸ್ ಮತ್ತು ಟರ್ಮ್ ಇನ್ಷೂರೆನ್ಸ್ ಪಾಲಿಸಿಗಳ ಮೇಲೆ ವಿಧಿಸಲಾಗುತ್ತಿರುವ ಹೆಚ್ಚಿನ ತೆರಿಗೆಯನ್ನು ಹಿಂಪಡೆಯುವಂತೆ ಸಲಹೆಗಳು ಕೇಳಿಬರುತ್ತಿವೆ. ಇಲ್ಲಿ ಹೆಲ್ತ್ ಇನ್ಷೂರೆನ್ಸ್, ಟರ್ಮ್ ಇನ್ಷೂರೆನ್ಸ್, ಸಾಂಪ್ರದಾಯಿಕ ಜೀವ ವಿಮೆ ಮತ್ತು ಯೂನಿಟ್ ಲಿಂಕ್ಡ್ ಇನ್ಷೂರೆನ್ಸ್ ಪಾಲಿಸಿಗಳ ಮೇಲೆ ಯಾವ್ಯಾವ ರೀತಿಯಲ್ಲಿ ಜಿಎಸ್ಟಿ ಹಾಕಲಾಗುತ್ತಿದೆ ಎನ್ನುವ ವಿವರ ಈ ಫೋಟೋ ಸ್ಟೋರಿಯಲ್ಲಿದೆ.
Updated on: Aug 12, 2024 | 1:23 PM

ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಜಿಎಸ್ಟಿ ಪದ್ಧತಿ ತರಲಾಗಿದೆ. ಹಿಂದೆ ಇದ್ದ ವಿವಿಧ ರೀತಿಯ ತೆರಿಗೆಗಳ ಬದಲು ಏಕೀಕೃತವಾದ ಜಿಎಸ್ಟಿಯನ್ನು ಅಳವಡಿಸಲಾಗಿದೆ. ತೀರಾ ಅಗತ್ಯ ವಸ್ತು ಮತ್ತು ಸೇವೆಗಳಿಗೆ ಕಡಿಮೆ ತೆರಿಗೆ ಇದೆ. ತೀರಾ ಐಷಾರಾಮಿ ಮತ್ತು ಅನವಶ್ಯಕ ವಸ್ತುಗಳಿಗೆ ಹೆಚ್ಚಿನ ಜಿಎಸ್ಟಿ ವಿಧಿಸುವ ವಿಧಾನವನ್ನು ಸರ್ಕಾರ ಅನುಸರಿಸುತ್ತಿದೆ.

ಜೀವ ವಿಮೆ ಅಥವಾ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪ್ರೀಮಿಯಮ್ಗಳ ಮೇಲೆ ವಿಧಿಸಲಾಗುವ ಜಿಎಸ್ಟಿಯನ್ನು ಹಿಂಪಡೆಯಬೇಕು ಎನ್ನುವ ಬಗ್ಗೆ ಸಲಹೆಗಳು ಕೇಳಿಬರುತ್ತಿವೆ. ಕೇಂದ್ರ ಸಚಿವರೇ ಆದ ನಿತಿನ್ ಗಡ್ಕರಿ ಅವರೇ ಸ್ವತಃ ಈ ಸಲಹೆ ನೀಡಿದ್ದಾರೆ. ಜೀವನದ ಅನಿಶ್ಚಿತತೆಯ ಮೇಲೆ ಹೆಚ್ಚು ತೆರಿಗೆ ವಿಧಿಸುವುದು ಸರಿಯಲ್ಲ. ಹಾಗೆಯೇ ಇನ್ಷೂರೆನ್ಸ್ ವಲಯಕ್ಕೂ ಇದು ಮಾರಕ ಎನ್ನುವುದು ಅವರ ಅಭಿಪ್ರಾಯ.

ಬೇರೆ ಬೇರೆ ಇನ್ಷೂರೆನ್ಸ್ ಪ್ರಾಕಾರಗಳಿಗೆ ವಿಭಿನ್ನ ಜಿಎಸ್ಟಿ ದರ ಇದೆ. ಹೆಲ್ತ್ ಇನ್ಷೂರೆನ್ಸ್ನಲ್ಲಿ ಪ್ರೀಮಿಯಮ್ ಮೇಲೆ ಶೇ. 18ರಷ್ಟು ಜಿಎಸ್ಟಿ ದರ ಹಾಕಲಾಗುತ್ತಿದೆ. ಇತರ ವಿಮೆಗಳ ಮೇಲೆ ಎಷ್ಟು ತೆರಿಗೆ ಇದೆ ಎನ್ನುವ ವಿವರ ಮುಂದಿದೆ.

ಟರ್ಮ್ ಇನ್ಷೂರೆನ್ಸ್ ಅಥವಾ ಅವಧಿ ವಿಮಾ ಪಾಲಿಸಿಗೂ ಕೂಡ ಶೇ. 18ರಷ್ಟು ಜಿಎಸ್ಟಿ ತೆರಿಗೆ ಇದೆ. ಈ ಟರ್ಮ್ ಪ್ಲಾನ್ಗಳು ರಿಸ್ಕ್ ಕವರೇಜ್ ಮಾತ್ರ ಹೊಂದಿರುತ್ತವೆ. ನಿರ್ದಿಷ್ಟ ಅವಧಿಯವರೆಗೆ ಮಾತ್ರವೇ ಸೀಮಿತವಾಗಿರುವ ಇವುಗಳ ಪ್ರೀಮಿಯಮ್ ಹಣ ಬಹಳ ಕಡಿಮೆ ಇರುತ್ತದೆ. ಈ ಟರ್ಮ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಮೇಲೆ ಶೇ. 18ರಷ್ಟು ಜಿಎಸ್ಟಿ ಇರುವುದು ಈಗ ಅಸಮಾಧಾನಕ್ಕೆ ಕಾರಣವಾಗಿದೆ.

ಇನ್ನು, ಮಾಮೂಲಿಯ ಜೀವ ವಿಮಾ ಯೋಜನೆಗಳಿಗೆ ಬೇರೆ ರೀತಿಯ ಜಿಎಸ್ಟಿ ಅನ್ವಯ ಆಗುತ್ತದೆ. ಈ ಲೈಫ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿದ ವರ್ಷ ಪ್ರೀಮಿಯಮ್ ಹಣಕ್ಕೆ ಶೇ. 4.5ರಷ್ಟು ಜಿಎಸ್ಟಿ ಇರುತ್ತದೆ. ನಂತರದ ವರ್ಷಗಳಲ್ಲಿ ಶೇ. 2.25 ತೆರಿಗೆ ಮಾತ್ರವೇ ಇರುತ್ತದೆ.

ಯುಲಿಪ್ ಅಥವಾ ಮಾರುಕಟ್ಟೆ ಜೋಡಿತ ಇನ್ಷೂರೆನ್ಸ್ ಪ್ಲಾನ್ಗಳಲ್ಲಿ ಪಾಲಿಸಿದಾರ ತನ್ನ ಲೈಫ್ ರಿಸ್ಕ್ ಕವರೇಜ್ಗೆ ಪಾವತಿಸುವ ಹಣ ಮತ್ತಿತರ ಶುಲ್ಕಕ್ಕೆ ತೆರಿಗೆ ಇರುತ್ತದೆ. ಇದರಲ್ಲಿ ಪಾವತಿಸಲಾಗುವ ಪ್ರೀಮಿಯಮ್ ಹಣದಲ್ಲಿ ಶೇ. 18ರಷ್ಟು ಜಿಎಸ್ಟಿ ಮುರಿದುಕೊಂಡು, ಉಳಿದ ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತದೆ.




