
ಧಾರಾಕಾರ ಮಳೆಗೆ ಹುಬ್ಬಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ಗಣೇಶ್ ನಗರ, ಆನಂದನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಯಿತು. ಮನೆಯೊಳಗೆ ನೀರು ನುಗ್ಗಿದ್ದರಿಂದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾದವು. ಟಿವಿ, ಫ್ರಿಡ್ಜ್, ವಾಷಿಂಗ್ ಮಷಿನ್ ಎಲ್ಲವೂ ನೀರು ಪಾಲಾದವು.

ಒಟ್ಟಾರೆಯಾಗಿ ಕರ್ನಾಟಕದಾದ್ಯಂತ ಮಳೆ ಸಂಬಂಧಿತ ಅವಘಡಗಳಲ್ಲಿ ಮಂಗಳವಾರ 8 ಜನರು ಮೃತಪಟ್ಟಿದ್ದಾರೆ. ಕೊಪ್ಪಳದಲ್ಲಿ ಸಿಡಿಲಿನ ಹೊಡೆತಕ್ಕೆ ಇಬ್ಬರು, ಬಳ್ಳಾರಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಒಬ್ಬರು, ವಿಜಯಪುರದಲ್ಲೂ ಓರ್ವ ವ್ಯಕ್ತಿ ಸಿಡಿಲು ಬಡಿದು ಇಹಲೋಕ ತ್ಯಜಿಸಿದ್ದಾರೆ. ಗದಗದಲ್ಲಿ ಮಳೆ ನೀರಿಗೆ ಬೈಕ್ ಸವಾರ ಕೊಚ್ಚಿಕೊಂಡು ಹೋಗಿದ್ದಾರೆ.

ಬೆಳಗಾವಿಯ ಗೋಕಾಕ್ನಲ್ಲಿ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಮದ್ಯ ಸೇವಿಸಿದ್ದ 52 ವರ್ಷದ ಕಾಶಪ್ಪ ಶಿರಟ್ಟಿ ಕಾಲು ಜಾರಿದ್ದರಿಂದ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದಾರೆ. ಭಾರೀ ಮಳೆಯಿಂದಾಗಿ ಗೋಕಾಕ್ ಮಟನ್ ಮಾರುಕಟ್ಟೆಗೆ ನೀರು ನುಗ್ಗಿದೆ. ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ ಜನರನ್ನು ಸಂಕಷ್ಟಕ್ಕೆ ದೂಡಿದೆ.

ಗದಗದ ಬೆನಕೊಪ್ಪ ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಬೈಕ್ ಸವಾರ ಕೊಚ್ಚಿ ಹೋಗಿದ್ದಾರೆ. ಪತ್ನಿಯ ತವರು ಮನೆಗೆ ಹೊರಟಿದ್ದ ಶರಣಪ್ಪ ಹಡಗಲಿ ಕೊಚ್ಚಿ ಹೋಗಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚು ಮಳೆ ಬಾರದಿದ್ದರೂ, ಸಣ್ಣ ಮಳೆಗೇ ಹೆಚ್ಚು ಅವಾಂತರಗಳಾಗುತ್ತಿವೆ. ಮಂಗಳವಾರ ಸಂಜೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ 36ಕ್ಕೂ ಹೆಚ್ಚು ಬೃಹತ್ ಮರಗಳು ನೆಲಕ್ಕುರುಳಿವೆ. ಬಿಬಿಎಂಪಿ 8 ವಲಯದಲ್ಲಿ 36ಕ್ಕೂ ಹೆಚ್ಚು ಮರಗಳು, 121 ಕೊಂಬೆಗಳು ಧರೆಗುರುಳಿರುವ ಮಾಹಿತಿ ಸಿಕ್ಕಿದೆ. ಇನ್ನು ಬೆಂಗಳೂರು ದಕ್ಷಿಣ, ಬೊಮ್ಮನಹಳ್ಳಿ ವಲಯದಲ್ಲೇ ಹೆಚ್ಚು ಮರಗಳು ಉರುಳಿವೆ.

ಮೆಜೆಸ್ಟಿಕ್, ಶಾಂತಿನಗರ, ಬಸವನಗುಡಿ, ಮಲ್ಲೇಶ್ವರಂ ಸೇರಿದಂತೆ ಇಡೀ ನಗರವನ್ನೇ ಮಳೆರಾಯ ಆವರಿಸಿದ್ದ. ರಸ್ತೆಗಳೆಲ್ಲಾ ಜಲಾವೃತ ಆಗಿದ್ದವು. ಮಳೆ ಶುರುವಾಗುತ್ತಿದ್ದಂತೆಯೇ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗಿತ್ತು. ಆ ಬಳಿಕ ನಿಧಾನವಾಗಿ ವಾಹನಗಳ ಓಡಾಟ ಸಾಗಿತ್ತು.

ಭಾರಿ ಮಳೆಯಿಂದ ಮಾನ್ಯತಾ ಟೆಕ್‌ಪಾರ್ಕ್ ರಸ್ತೆ ಜಲಾವೃತ ಆಗಿತ್ತು. ಇಲ್ಲಿ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ನೊಳಗೆ ನೀರು ನುಗ್ಗಿತ್ತು. ಹೆಚ್‌ಬಿಆರ್ ಲೇಔಟ್‌ನಲ್ಲಿ ಬೀದಿ ಬೀದಿಯಲ್ಲೂ ನೀರು ನಿಂತಿತ್ತು. ಅಷ್ಟೇ ಅಲ್ಲ ಹಲವು ಮನೆಗಳಿಗೆ ನೀರು ಹೊಕ್ಕಿತ್ತು.
Published On - 7:07 am, Wed, 14 May 25