
ಕಬಿನಿ ಹಾಗೂ ಕೆಆರ್ಎಸ್ನಿಂದ ಹೊರಹರಿವು ಹೆಚ್ಚಳ ಹಿನ್ನೆಲೆ ಭರಚುಕ್ಕಿ ಜಲಪಾತ ಹಾಲ್ನೊರೆಯಂತೆ ತುಂಬಿ ಹರಿಯುತ್ತಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತಿದ್ದು ಭರಚುಕ್ಕಿ ವೀಕ್ಷಣೆಗೆ ಪ್ರವಾಸಿಗರ ದಂಡು ಹರಿದುಬಂದಿದೆ.

ಕುದುರೆಮುಖ ವ್ಯಾಪ್ತಿಯ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಿಂದಾಗಿ ಹೊರನಾಡು-ಕಳಸ ಸಂಪರ್ಕ ಕಡಿತಗೊಂಡಿದೆ. ಹೆಬ್ಬಾಳೆ ಸೇತುವೆ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ.

ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರಿ ಮಳೆ ಹಿನ್ನೆಲೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಫಾಲ್ಸ್ ಗಳಿಗೆ ಜೀವ ಕಳೆ ಬಂದಿದೆ. ಝರಿ ,ಫಾಲ್ಸ್, ಹೊನ್ನಮ್ಮನ ಹಳ್ಳ ಮೈದುಂಬಿ ಹರಿಯುತ್ತಿದೆ.

ಮೈಸೂರಿನಲ್ಲಿರುವ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಡ್ಯಾಂ ನಿಂದ ಹೆಚ್ಚುವರಿ ನೀರು ನದಿಗೆ ಬಿಡಲಾಗುತ್ತಿದೆ. ನಂಜನಗೂಡಿನ ಹಳ್ಳದಕೇರಿ, ಶ್ರೀಕಂಠೇಶ್ವರ ದೇಗುಲದ ಸ್ನಾನಘಟ್ಟ, ಬೊಕ್ಕಳ್ಳಿ, ಕಡಜಟ್ಟಿ ಗ್ರಾಮಗಳಿಗೆ ಆತಂಕ ಎದುರಾಗಿದೆ.

ಬೆಳಗಾವಿಯ ಧಾಮಣೆ ತಿಲಾರಿ ಫಾಲ್ಸ್ ಕೂಡ ಮೈತುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗುಡ್ಡೆತೋಟ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ತೀರ್ಥಕೆರೆ ಫಾಲ್ಸ್ ಮೈತುಂಬಿ ಹರಿಯುತ್ತಿದೆ. ದಟ್ಟ ಕಾನನದ ನಡುವೆ ಹಸಿರು ಹಾದಿಯನ್ನು ಸೀಳಿ ತೀರ್ಥಕೆರೆ ಫಾಲ್ಸ್ ಭೋರ್ಗರೆಯುತ್ತಿದೆ.