- Kannada News Photo gallery Paris Olympics 2024 72 Indian athletes will play in Olympics for the first time
Paris Olympics 2024: 72 ಭಾರತೀಯರಿಗೆ ಇದು ಮೊದಲ ಒಲಿಂಪಿಕ್ಸ್; ನಮ್ಮ ಕನ್ನಡತಿಯೇ ಅತ್ಯಂತ ಕಿರಿಯ ಸ್ಪರ್ಧಿ!
Paris Olympics 2024: ಭಾರತವನ್ನು ಪ್ರತಿನಿಧಿಸಲಿರುವ 117 ಕ್ರೀಡಾಪಟುಗಳಲ್ಲಿ ಬರೋಬ್ಬರಿ 72 ಕ್ರೀಡಾಪಟುಗಳಿಗೆ ಇದು ಮೊದಲ ಒಲಿಂಪಿಕ್ಸ್ ಆಗಲಿದೆ. ಇದರರ್ಥ ಈ 72 ಕ್ರೀಡಾಪಟುಗಳು ಮೊದಲ ಬಾರಿಗೆ ಈ ಮಹಾನ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಕರ್ನಾಟಕದ ಬೆಂಗಳೂರಿನ 14 ವರ್ಷದ ಧಿನಿಧಿ ದೇಸಿಂಗು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅತ್ಯಂತ ಕಿರಿಯ ಅಥ್ಲೀಟ್ ಆಗಿದ್ದಾರೆ.
Updated on: Jul 17, 2024 | 9:02 PM

ಈ ತಿಂಗಳಾಂತ್ಯದಲ್ಲಿ ಅಂದರೆ ಇದೇ ಜುಲೈ 26 ರಿಂದ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ ಭಾರತೀಯ ಅಥ್ಲೀಟ್‌ಗಳ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಇಂದು ಬಿಡುಗಡೆ ಮಾಡಿದೆ. ಅದರ ಪ್ರಕಾರ ಈ ಬಾರಿ ಈ ಕ್ರೀಡಾಕೂಟದಲ್ಲಿ ಭಾರತದಿಂದ ಒಟ್ಟು 117 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ ಈ 117 ಕ್ರೀಡಾಪಟುಗಳಲ್ಲಿ ಬರೋಬ್ಬರಿ 72 ಕ್ರೀಡಾಪಟುಗಳಿಗೆ ಇದು ಮೊದಲ ಒಲಿಂಪಿಕ್ಸ್ ಆಗಲಿದೆ. ಇದರರ್ಥ ಈ 72 ಕ್ರೀಡಾಪಟುಗಳು ಮೊದಲ ಬಾರಿಗೆ ಈ ಮಹಾನ್ ಕ್ರೀಡಾಕೂಟದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಈ 72 ಕ್ರೀಡಾಪಟುಗಳಲ್ಲಿ ಪ್ರಮುಖ ಹೆಸರುಗಳೆಂದರೆ ಅಂದರೆ ಪದಕ ಗೆಲ್ಲುವ ನಿರೀಕ್ಷೆ ಹೊತ್ತಿರುವ ಕ್ರೀಡಾಪಟುಗಳಲ್ಲಿ ಎರಡು ಬಾರಿಯ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್, ಜೂನಿಯರ್ ವಿಶ್ವ ಕುಸ್ತಿ ಚಾಂಪಿಯನ್ ಅನಂತ್ ಪಂಗಲ್ ಮತ್ತು ರಿತಿಕಾ ಹೂಡಾ, ಜ್ಯೋತಿ ಯರಾಜಿ ಮತ್ತು ಜಾವೆಲಿನ್ ಎಸೆತಗಾರ ಕಿಶೋರ್ ಕುಮಾರ್ ಜೆನಾ ಸೇರಿದ್ದಾರೆ.

ಚೊಚ್ಚಲ ಒಲಂಪಿಕ್ಸ್ ಆಡುತ್ತಿರುವ ಈ 72 ಕ್ರೀಡಾಪಟುಗಳಲ್ಲಿ ಕರ್ನಾಟಕದ ಬೆಂಗಳೂರಿನ 14 ವರ್ಷದ ಧಿನಿಧಿ ದೇಸಿಂಗು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅತ್ಯಂತ ಕಿರಿಯ ಅಥ್ಲೀಟ್ ಆಗಿದ್ದಾರೆ. 200 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ದೇಸಿಂಗು ಸ್ಪರ್ಧಿಸಲಿದ್ದಾರೆ.

ಇದಲ್ಲದೆ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಎರಡನೇ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಧಿನಿಧಿ ದೇಸಿಂಗು ಭಾಜನರಾಗಿದ್ದಾರೆ. ಆರತಿ ಸಹಾ ಅವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಹೊಂದಿದ್ದು, ಅವರು ತಮ್ಮ 11 ನೇ ವಯಸ್ಸಿನಲ್ಲಿ 1952 ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಇನ್ನು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ 117 ಸ್ಪರ್ಧಾಳುಗಳಲ್ಲಿ ಹಲವರ ಮೇಲೆ ಪದಕಗಳ ನಿರೀಕ್ಷೆ ಇಡಲಾಗಿದೆ. ಅಲ್ಲದೆ ಕಳೆದ ಬಾರಿಯ 7 ಪದಕಗಳ ದಾಖಲೆ ಈ ಬಾರಿ ಮುರಿಯಲಿದೆ ಎಂಬ ನಂಬಿಕೆ ಇದೆ. ಕಳೆದ ಬಾರಿ ನಡೆದ ಟೋಕಿಯೊ ಒಲಿಂಪಿಕ್ಸ್ ಭಾರತ ಒಟ್ಟು 7 ಪದಕಗಳನ್ನು ಗೆದ್ದಿತ್ತು, ಇದರಲ್ಲಿ ನೀರಜ್ ಚೋಪ್ರಾ ಅವರ ಚಿನ್ನದ ಪದಕವೂ ಸೇರಿತ್ತು.

ಈ ಬಾರಿಯೂ ಭಾರತ ಕುಸ್ತಿ, ಬ್ಯಾಡ್ಮಿಂಟನ್, ಜಾವೆಲಿನ್ ಎಸೆತ, ಶೂಟಿಂಗ್ ಮತ್ತು ಹಾಕಿಯಲ್ಲಿ ಪದಕದ ಭರವಸೆಯಲ್ಲಿದೆ. ಇದುವರೆಗೆ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಒಟ್ಟು 10 ಚಿನ್ನದ ಪದಕಗಳನ್ನು ಗೆದ್ದಿದ್ದು, ಅದರಲ್ಲಿ 8 ಹಾಕಿಯಿಂದಲೇ ಬಂದಿವೆ. ವೈಯಕ್ತಿಕ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಶೂಟಿಂಗ್‌ನಲ್ಲಿ ಚಿನ್ನದ ಪದಕ ಮತ್ತು ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಾರೆ.
