- Kannada News Photo gallery High alert everywhere in Bengaluru after Bomb Threat: How is the security check? See in pictures
Bomb Threat: ಬೆಂಗಳೂರಿನಲ್ಲಿ ಎಲ್ಲೆಡೆ ಕಟ್ಟೆಚ್ಚರ: ಹೇಗಿದೆ ಭದ್ರತಾ ತಪಾಸಣೆ? ಚಿತ್ರಗಳಲ್ಲಿ ನೋಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ ಪರಮೇಶ್ವರ ಸೇರಿದಂತೆ ಹಲವರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಮೆಜೆಸ್ಟಿಕ್, ರೈಲು ನಿಲ್ದಾಣ ಮತ್ತಿತರ ಪ್ರಮುಖ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
Updated on: Mar 06, 2024 | 1:02 PM

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ಇತರ ಕಡೆಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಮೆಜೆಸ್ಟಿಕ್ ಮತ್ತು ಇತರ ಪ್ರದೇಶಗಳಲ್ಲಿ ಜನರ ಲಗೇಜ್ ಸ್ಕ್ಯಾನ್ ಮಾಡಲು ಮೆಟಲ್ ಡಿಟೆಕ್ಟರ್‌ಗಳನ್ನು ಬಳಸಲಾಗುತ್ತಿದೆ.

ಅದೇ ರೀತಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಂಗಳವಾರ ಬೆದರಿಕೆ ಇಮೇಲ್ ಬಂದಿರುವುದನ್ನು ಖಚಿತಪಡಿಸಿದ್ದಾರೆ ಮತ್ತು ಪೊಲೀಸರು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಇದು ನಿಜ ಅಥವಾ ಸುಳ್ಳು ಬೆದರಿಕೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಬ್ಲ್ಯಾಕ್‌ಮೇಲರ್ ಯಾರೆಂಬುದು ನಮಗೆ ತಿಳಿದಿಲ್ಲ. ಸಂದೇಶವನ್ನು ನಮ್ಮ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿದ್ದೇವೆ. ಅವರು ತನಿಖೆ ನಡೆಸುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದ್ದರು.

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ಸೇರಿದಂತೆ ಇತರರಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, 2.5 ಮಿಲಿಯನ್ ಡಾಲರ್‌ಗೆ ಬೇಡಿಕೆ ಇಡಲಾಗಿತ್ತು. ಹಣ ನೀಡದಿದ್ದರೆ ರಾಮೇಶ್ವರಂ ಕೆಫೆ ಮಾದರಿಯಲ್ಲೇ ಸ್ಫೋಟ ನಡೆಸಲಾಗುವುದು ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.

ರೈಲುಗಳು, ಟ್ಯಾಕ್ಸಿಗಳು, ದೇವಸ್ಥಾನಗಳು, ಹೋಟೆಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇದೇ ರೀತಿಯ ಸ್ಫೋಟಗಳು ಸಂಭವಿಸಲಿವೆ. ಮೊದಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ‘ಅಂಬಾರಿ ಉತ್ಸವ' ಬಸ್‌ನಲ್ಲಿ ಸ್ಫೋಟ ಎಸಗುತ್ತೇವೆ ಎಂದು ಇಮೇಲ್ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿತ್ತು.

ರಾಜ್ಯಾದ್ಯಂತ ಒಟ್ಟು 20 ಅಂಬಾರಿ ಉತ್ಸವ ಬಸ್ಗಳು ಕಾರ್ಯಾಚರಿಸುತ್ತಿದ್ದು, ದಾಳಿಯ ಭೀತಿ ಎದುರಾಗಿದೆ. ಇದರ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್ಗಳಲ್ಲಿ ತಪಾಸಣೆ ಹೆಚ್ಚಿಸಿದ್ದಾರೆ. ಅನುಮಾನಾಸ್ಪದ ಪ್ರಯಾಣಿಕರ ವಿಚಾರಣೆ ನಡೆಸಿ, ಪೊಲೀಸರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.









