
ಮುಂಚಿತವಾಗಿ ಸುಳಿವು ನೀಡಿ: ನಿಮ್ಮ ಹೆತ್ತವರಿಗೆ ನಿಮ್ಮ ಸಂಗಾತಿಯನ್ನು ತಕ್ಷಣ ಪರಿಚಯಿಸಬೇಡಿ. ಮೊದಲು ಅವನನ್ನು ಅಥವಾ ಆಕೆಯನ್ನು ಒಳ್ಳೆಯ ಸ್ನೇಹಿತ ಎಂದು ಪರಿಚಯಿಸಿ. ಅವರು ನಿಮ್ಮ ಸಂಗಾತಿಯನ್ನು ಇಷ್ಟಪಡಲು ಪ್ರಾರಂಭಿಸಿದಾಗ, ನಿಧಾನವಾಗಿ ಅವರಿಗೆ ನಿಮ್ಮ ಸಂಬಂಧದ ಬಗ್ಗೆ ಸುಳಿವು ನೀಡಿ. ಹೀಗೆ ಮನವೊಲಿಸುವ ಮೂಲಕ ಪ್ರೀತಿಗೆ ಒಪ್ಪಿಗೆ ಪಡೆಯಿರಿ.

ಅವರಿಗೆ ವಿಶ್ವಾಸ ಬರುವಂತೆ ಮಾಡಿ: ನಿಮ್ಮ ಸಂಬಂಧದ ಬಗ್ಗೆ ನಿಮ್ಮ ಹೆತ್ತವರಿಗೆ ಹೇಳುವಾಗ, ಮೊದಲು ನೀವು ಪ್ರೀತಿಸುವ ಹುಡುಗ ಅಥವಾ ಹುಡುಗಿಯ ಜೊತೆ ಸಂತೋಷವಾಗಿರುತ್ತೀರಿ, ಅವರು ನಮ್ಮನ್ನು ತುಂಬಾನೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಹೆತ್ತವರಿಗೆ ಭರವಸೆ ನೀಡಿ. ಹೀಗೆ ನಿಮ್ಮ ಆಯ್ಕೆ ಸರಿಯಾಗಿದೆ ಮತ್ತು ನಿಮ್ಮ ಸಂಬಂಧವು ಬಲವಾಗಿದೆ ಎಂದು ಅವರಿಗೆ ಭರವಸೆ ನೀಡಿ. ಹೀಗೆ ಮಾಡಿದರೆ ಖಂಡಿತವಾಗಿಯೂ ಮನೆಯವರು ಪ್ರೀತಿಗೆ ಒಪ್ಪಿಗೆ ಕೊಡ್ತಾರೆ.

ಮೊದಲು ಯಾರನ್ನಾದರೂ ಮನವೊಲಿಸಿ: ತಂದೆ ಅಥವಾ ತಾಯಿ ಈ ಇಬ್ಬರಲ್ಲಿ ನೀವು ಯಾರ ಹತ್ತಿರ ಕ್ಲೋಸ್ ಆಗಿದ್ದೀರಾ, ಅವರ ಬಳಿ ಮೊದಲು ಪ್ರೀತಿ ವಿಚಾರವನ್ನು ಹೇಳಿ. ಮನವೊಲಿಸಿ. ಹೀಗೆ ಮಾಡುವುದರಿಂದ ನಂತರದ ದಿನಗಳಲ್ಲಿ ಮನೆಯಲ್ಲಿರುವ ಎಲ್ಲಾ ಸದಸ್ಯರನ್ನು ನಿಮ್ಮ ಪ್ರೇಮಕ್ಕೆ ಒಪ್ಪಿಗೆ ನೀಡುವಂತೆ ಮಾಡಬಹುದು.

ನಿಮ್ಮ ಒಡಹುಟ್ಟಿದವರ ಸಹಾಯ ಪಡೆಯಿರಿ: ನಿಮಗೆ ಸಹೋದರ ಅಥವಾ ಸಹೋದರಿಯರಿದ್ದರೆ, ನಿಮ್ಮ ಹೆತ್ತವರನ್ನು ಮನವೊಲಿಸಲು ಅವರ ಸಹಾಯ ಪಡೆಯಿರಿ. ನಿಮ್ಮ ಪ್ರೀತಿಯ ಬಗ್ಗೆ ಮತ್ತು ನೀವು ಪ್ರೀತಿಸುವ ವ್ಯಕ್ತಿ ಎಷ್ಟು ಒಳ್ಳೆಯವರು, ಸಂಗಾತಿಯನ್ನು ಆಯ್ಕೆ ಮಾಡುವ ವಿಷಯದಲ್ಲಿ ನಿಮ್ಮ ಆಯ್ಕೆ ಸರಿಯಾಗಿದೆ ಎಂಬುದನ್ನು ನಿಮ್ಮ ಒಡಹುಟ್ಟಿದವರ ಮುಖಾಂತರ ಪೋಷಕರಿಗೆ ತಿಳಿಸಿ.

ಸಂಬಂಧಿಕ ಸಹಾಯ ಪಡೆಯಿರಿ: ಪ್ರೀತಿ ವಿಚಾರವನ್ನು ಮನೆಯಲ್ಲಿ ತಿಳಿಸಲು ನಿಮ್ಮ ಹತ್ತಿರದ ಸಂಬಂಧಿಗಳ ಸಹಾಯ ಪಡೆಯಬಹುದು. ಮೊದಲಿಗೆ ಅವರ ಬಳಿ ನಿಮ್ಮ ಪ್ರೀತಿ ವಿಚಾರವನ್ನು ಹೇಳಿ, ನಂತರ ನಿಮ್ಮ ಹತ್ತಿರ ಸಂಬಂಧಿ ನಿಮ್ಮ ಪೋಷಕರ ಮನವೊಲಿಸುವ ಮೂಲಕ ನಿಮ್ಮ ಪ್ರೀತಿಗೆ ಒಪ್ಪಿಗೆ ಪಡೆದುಕೊಳ್ಳಬಹುದು. ಇದು ಕೂಡಾ ಒಂದು ಪರಿಣಾಮಕಾರಿ ಮಾರ್ಗವಾಗಿದೆ.

ಇತರರ ಉದಾಹರಣೆ ನೀಡಿ: ನಿಮ್ಮ ಕುಟುಂಬದಲ್ಲಿ ಯಾರಾದರೂ ಅಥವಾ ಸ್ನೇಹಿತರು ಪ್ರೇಮ ವಿವಾಹವಾಗಿದ್ದರೆ, ಅವರು ಎಷ್ಟು ಅನ್ಯೋನ್ಯವಾಗಿದ್ದಾರೆ, ಸುಖವಾಗಿ ಜೀವನ ಸಾಗಿಸುತ್ತಿದ್ದಾರೆ ಎಂಬ ಉದಾಹರಣೆಯನ್ನು ನಿಮ್ಮ ಕುಟುಂಬಕ್ಕೆ ನೀಡಿ. ಈ ಮೂಲಕ ಮನೆಯವರ ವಿಶ್ವಾಸ ಗಳಿಸಿ, ಅವರು ನಿಮ್ಮ ಪ್ರೀತಿಗೆ ಒಪ್ಪಿ ನೀಡುವಂತೆ ಮಾಡಬಹುದು.