
ಕೆಲವರು ಅದರಲ್ಲೂ ಗಂಡಂದಿರ ವಿಚಾರಕ್ಕೆ ಬಂದಾಗ ನನ್ನ ಹೆಂಡ್ತಿ ಸರಿಯಾಗಿ ಅಡುಗೆ ಮಾಡೋಲ್ಲ, ಯಾವಾಗ್ಲೂ ಜಗಳವಾಡ್ತಾಳೆ, ಆಕೆಗೆ ಯಾವಾಗಲೂ ಆರೋಗ್ಯ ಸಮಸ್ಯೆ ಅಂತೆಲ್ಲಾ ತಮ್ಮ ಸಂಸಾರಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಸ್ನೇಹಿತರು, ಸಹದ್ಯೋಗಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದ್ರೆ ಯಾವತ್ತೂ ಈ ರೀತಿಯ ವಿಚಾರಗಳನ್ನು ಯಾರ ಬಳಿಯೂ ಶೇರ್ ಮಾಡಿಕೊಳ್ಳಬಾರದಂತೆ.

ಅನಾರೋಗ್ಯ: ಕೆಲವು ಪುರುಷರು ತಮ್ಮ ಹೆಂಡತಿ ಯಾವಾಗಲೂ ಅನಾರೋಗ್ಯದಿಂದ ಬಳಲುತ್ತಿರುತ್ತಾಳೆ, ಯಾವಾಗಲೂ ದಣಿದಿರುತ್ತಾಳೆ ಅಂತೆಲ್ಲಾ ಹೆಂಡತಿಯ ಆರೋಗ್ಯ ಸಮಸ್ಯೆಗಳ ಬಗ್ಗೆ ಇತರರ ಬಳಿ ಹೇಳುತ್ತಾರೆ. ಹೀಗೆ ಯಾರ ಬಳಿಯು ಹೆಂಡತಿಯ ಆರೋಗ್ಯದ ಬಗ್ಗೆ ದೂರಬಾರದು. ಒಂದು ವೇಳೆ ಈ ಮಾತು ನಿಮ್ಮ ಹೆಂಡತಿಯ ಕಿವಿಗೆ ಬಿದ್ದರೆ, ಬೇಸರ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಮಾತಿನಿಂದ ಮನಸ್ತಾಪ ಕೂಡ ಮೂಡುವ ಸಾಧ್ಯತೆ ಇರುತ್ತದೆ.

ಜಗಳಗಳು: ಗಂಡ ಹೆಂಡತಿಯ ನಡುವೆ ಬೆಟ್ಟದಷ್ಟು ಪ್ರೀತಿಯಿದ್ದರೂ ಕೆಲವೊಂದು ಬಾರಿ ಜಗಳಗಳು ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಕೆಲವರು ಹೆಂಡತಿ ಜಗಳ ಮಾಡ್ತಾಳೆ ಅಂತ ಆಕೆಯ ಬಗ್ಗೆ ಆಕೆ ಜಗಳಗಂಟಿ, ಹಾಗೆ ಹೀಗೆ ಅಂತೆಲ್ಲಾ ಇತರರೊಂದಿಗೆ ಹೆಂಡತಿಯ ಬಗ್ಗೆ ಋಣಾತ್ಮಕವಾಗಿ ದೂರುತ್ತಾರೆ. ಹೀಗೆ ನಿಮ್ಮ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಒಳ್ಳೆಯದಲ್ಲ. ಇದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು.

ಪ್ರೀತಿಯ ಬಗ್ಗೆ: ನಿಮ್ಮ ಪ್ರೀತಿಯ ಬಗ್ಗೆಯೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ನಿಮ್ಮಿಬ್ಬರ ಪ್ರೀತಿ ಹೇಗೆ ಆರಂಭವಾಯಿತು, ಮದುವೆಯ ಬಳಿಕ ಈ ಪ್ರೀತಿ ಹೇಗಿದೆ ಎಂಬುದನ್ನು ಹೇಳಿಕೊಳ್ಳಬೇಡಿ. ಏಕೆಂದರೆ ಇದು ಸಂಗಾತಿಗಳಿಬ್ಬರ ನಡುವಿನ ಗೌಪ್ಯ ವಿಷಯವಾಗಿದೆ. ಹೀಗೆ ನೀವು ನಿಮ್ಮ ಸುಂದರ ಸಂಸಾರದ ಬಗ್ಗೆ ಶೇರ್ ಮಾಡಿದ್ರೆ, ದೃಷ್ಟಿ ಬೀಳುವ ಸಾಧ್ಯತೆಯೂ ಇರುತ್ತದೆ.

ದೌರ್ಬಲ್ಯ: ಪ್ರತಿಯೊಬ್ಬರಲ್ಲೂ ಸಕಾರಾತ್ಮಕ ಅಂಶಗಳು ಇರುವಂತೆ ಏನಾದರೊಂದು ನ್ಯೂನ್ಯತೆ ಇದ್ದೇ ಇರುತ್ತದೆ. ಹೀಗಿರುವಾಗ ನಿಮ್ಮ ಹೆಂಡತಿಗೂ ಏನಾದ್ರೂ ನ್ಯೂನ್ಯತೆ ಇದ್ದರೆ ಅದನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. ಹೀಗೆ ನಿಮ್ಮ ಹೆಂಡತಿಯ ದೌರ್ಬಲ್ಯಗಳನ್ನು ನೀವು ಬಹಿರಂಗಪಡಿಸಿದರೆ ಅವು ನಿಮ್ಮ ದೌರ್ಬಲ್ಯವಾಗುತ್ತದೆ. ಹಾಗಾಗಿ ಸುಖ ಸಂಸಾರವನ್ನು ನಡೆಸಲು ಹೆಂಡತಿಗೆ ಸಂಬಂದಿಸಿದ ಈ ವಿಷಯಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಬೇಡಿ.

ಇನ್ನೊಂದು ಮುಖ್ಯವಾದ ವಿಚಾರ ಏನಪ್ಪಾ ಅಂದ್ರೆ ಇತರರ ಮುಂದೆ ನಿಮ್ಮ ಹೆಂಡತಿಗೆ ಬೈಯುವಂತಹದ್ದು ಅಥವಾ ಆಕೆಯನ್ನು ಟೀಕಿಸುವಂತಹದ್ದನ್ನು ಕೂಡ ಮಾಡಬಾರದು. ಖಂಡಿತವಾಗಿಯೂ ಇದು ನಿಮ್ಮ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ಎಲ್ಲರ ಮುಂದೆ ಹೆಂಡತಿಯನ್ನು ಗೌರವಯುತವಾಗಿ ನಡೆಸಿಕೊಳ್ಳಿ.