- Kannada News Photo gallery Indian Badminton Star Ayush Shetty Wins US Open Super 300: Details and Journey
ಉಡುಪಿಯ ಆಯುಷ್ ಶೆಟ್ಟಿ ಯುಎಸ್ ಚಾಂಪಿಯನ್ ಶಿಪ್ನಲ್ಲಿ ಅದ್ವಿತೀಯ ಸಾಧನೆ
ಉಡುಪಿಯ ಅಯುಷ್ ಶೆಟ್ಟಿ ಅವರು ಅಮೆರಿಕದಲ್ಲಿ ನಡೆದ US ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ನಲ್ಲಿ ಗೆಲುವು ಸಾಧಿಸಿದ್ದಾರೆ. 2023 ರ ನಂತರದ ಈ ಮೊದಲ ವಿದೇಶಿ ಪ್ರಶಸ್ತಿಯು ಅವರ ಕಠಿಣ ಪರಿಶ್ರಮ ಮತ್ತು ತರಬೇತಿಯ ಫಲಿತಾಂಶವಾಗಿದೆ. ಅವರು ಬಾಲ್ಯದಿಂದಲೂ ಬ್ಯಾಡ್ಮಿಂಟನ್‌ನಲ್ಲಿ ತೋರಿಸಿದ ಆಸಕ್ತಿ ಮತ್ತು ಪೋಷಕರ ಬೆಂಬಲವು ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರ ಗೆಲುವು ರಾಷ್ಟ್ರವ್ಯಾಪಿ ಸಂಭ್ರಮಕ್ಕೆ ಕಾರಣವಾಗಿದೆ.
Updated on:Jul 01, 2025 | 9:51 PM

ಅಮೆರಿಕದಲ್ಲಿ ಇತ್ತೀಚಿಗೆ ನಡೆದ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಾಳದ ಅಯುಷ್ ಶೆಟ್ಟಿ ಬ್ಯಾಡ್ಮಿಂಟನ್‌ನಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. 2023ರ ಬಳಿಕ ಭಾರತಕ್ಕೆ ಮೊದಲ ವಿದೇಶಿ ಬ್ಯಾಡ್ಮಿಂಟನ್ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಆಯುಷ್ ಶೆಟ್ಟಿ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

47 ನಿಮಿಷ ಕಾಲ ನಡೆದ ಯುಎಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಆಯುಷ್ ಶೆಟ್ಟಿಯವರು ಕೆನಡಾದ ಮೂರನೇ ಶ್ರೇಯಾಂಕದ ಬ್ರಿಯಾನ್ ಯಾಂಗ್ ಅವರನ್ನು 21-18, 21-13 ಅಂತರದಲ್ಲಿ ಪರಾಭವಗೊಳಿಸಿದರು. ಇದು ಯಾಂಗ್ ವಿರುದ್ಧ ಆಯುಷ್ ಸಾಧಿಸಿದ 3ನೇ ಗೆಲುವಾಗಿದೆ.

ಆಯುಷ್ ಶೆಟ್ಟಿಯವರು 2005ರ ಮೇ 3ರಂದು ಉಡುಪಿ ಜಿಲ್ಲೆಯ ಕಾರ್ಕಳದ ಸಾಣೂರಿನಲ್ಲಿ ಜನಿಸಿದರು. ತಂದೆ ರಾಮ್ ಪ್ರಕಾಶ್ ಶೆಟ್ಟಿ, ತಾಯಿ ಶಾಲ್ಮಲಿ ಶೆಟ್ಟಿ. ಆಯುಷ್ ಶೆಟ್ಟಿಯವರು 8 ವರ್ಷದ ಬಾಲಕನಿದ್ದಾಗ ತಂದೆಯಿಂದ ಬ್ಯಾಡ್ಮಿಂಟನ್ ಆಡುವುದನ್ನು ಪ್ರೇರಣೆ ಪಡೆದರು. ತಮ್ಮ ಮನೆಯ ಹಿತ್ತಲಿನಲ್ಲಿ ಬ್ಯಾಡ್ಮಿಂಟನ್ ಆಡಲು ಪ್ರಾರಂಭ ಮಾಡಿದರು. ತಂದೆ ರಾಮ್ ಪ್ರಕಾಶ್ ಶೆಟ್ಟಿ ಅವರು ಕೂಡ ಉತ್ತಮ ಬ್ಯಾಡ್ಮಿಂಟನ್ ಆಟಗಾರ ಆಗಿದ್ದಾರೆ. ಆಯುಷ್ ಶೆಟ್ಟಿಯವರು 10ನೇ ತರಗತಿವರೆಗೂ ಸಾಣೂರಿನ ಪ್ರಕೃತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.

ಆಯುಷ್ ಶೆಟ್ಟಿಯವರು ಆರಂಭದಲ್ಲಿ ಕಾರ್ಕಳ್ ಹಾಗೂ ಮಂಗಳೂರಿನಲ್ಲಿ ಸುಭಾಷ್ ಮತ್ತು ಚೇತನ್ ಎಂಬುವರಿಂದ ಬ್ಯಾಡ್ಮಿಂಟನ್ ತರಬೇತಿ ಪಡೆದರು. ಆಯುಷ್ ಶೆಟ್ಟಿಯವರ ಪ್ರತಿಭೆ ಗುರುತಿಸಿದ ಪೋಷಕರು, ಅವರಿಗೆ ಉತ್ತಮ ತರಬೇತಿ ಕೊಡಿಸಲು ಬೆಂಗಳೂರಿಗೆ ಕರೆದುಕೊಂಡು ಬಂದರು. ಬೆಂಗಳೂರಿನಲ್ಲಿ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಗೆ ಸೇರಿಸಿದರು. ಈ ಅಕಾಡೆಮಿಯಲ್ಲಿ ಸಾಗರ್ ಚೋಪ್ರಾ ಅವರಿಂದ ತರಬೇತಿ ಪಡೆದರು.

ನಂತರ ಆಯುಷ್ ಶೆಟ್ಟಿಯವರು ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಆಡಲು ಆರಂಭಿಸಿದರು. 2023ರಲ್ಲಿ ಆಯುಷ್ ಶೆಟ್ಟಿಯವರು 2023ರ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಮುಡಿಗೇಡಿಸಿಕೊಂಡರು.

ಪುತ್ರ ಆಯುಷ್ ಶೆಟ್ಟಿ ಅವರ ಸಾಧನೆ ಕಂಡು ತಾಯಿ ಶಾಲ್ಮಲಿ ಶೆಟ್ಟಿ ಪ್ರತಿಕ್ರಿಯಿಸಿದ್ದು, "ಆಯುಷ್ ದೇಶಕ್ಕೆ ಕೀರ್ತಿ ತಂದಿದ್ದಾನೆ. ಆಯುಷ್‌ಗೆ ಕರೆ ಮಾಡಿ ಶುಭ ಹಾರೈಸಿದ್ದೇವೆ. ಪುತ್ರ ಆಯುಷ್‌ನ ಈ ಸಾಧನೆ ಕಂಡು ಸಾಕಷ್ಟು ಖುಷಿ, ಹೆಮ್ಮೆ ಆಗುತ್ತಿದೆ. ಬಾಲ್ಯದಿಂದಲೂ ಆತ ಬ್ಯಾಡ್ಮಿಂಟನ್ ಬಗ್ಗೆ ಅತಿಯಾದ ಆಸಕ್ತಿ ಹೊಂದಿದ್ದನು. ಪ್ರತಿಭೆ, ಆಸಕ್ತಿ ಗುರುತಿಸಿ ಅದಕ್ಕೆ ಅನುಗುಣವಾಗಿ ಸಹಕಾರ ನೀಡಿದೆವು. ಬಿಡಬ್ಲ್ಯುಎಫ್ (BWF) ವರ್ಲ್ಡ್ ಟೂರ್ ಚೊಚ್ಚಲ ಪ್ರಶಸ್ತಿ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾನೆ. ಇಂಥ ಅನೇಕ ಪ್ರಶಸ್ತಿಗಳನ್ನು ಗೆದ್ದು ತರಲಿ. ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ಆತನ ಗುರಿಯಾಗಿದೆ ಎಂದು ಹೇಳಿದರು.
Published On - 9:16 pm, Tue, 1 July 25



