
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇದೀಗ ಪ್ಲೇಆಫ್ ಹೊಸ್ತಿಲಲ್ಲಿದೆ. ಆಡಿರುವ 11 ಪಂದ್ಯಗಳಲ್ಲಿ ಆರ್ಸಿಬಿ ತಂಡವು 8 ಜಯ ಸಾಧಿಸಿದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ದಾಖಲಿಸಿದರೆ ಪ್ಲೇಆಫ್ ಹಂತಕ್ಕೇರಲಿದೆ.

ಆರ್ಸಿಬಿ ಪ್ಲೇಆಫ್ ಹಂತಕ್ಕೇರಿದರೆ, ನಿರ್ಣಾಯಕ ಪಂದ್ಯಗಳಿಗೆ ಜೇಕಬ್ ಬೆಥೆಲ್ ಅಲಭ್ಯರಾಗುವುದು ಖಚಿತವಾಗಿದೆ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಬೆಥೆಲ್ ಅವರನ್ನು ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದ್ದು, ಹೀಗಾಗಿ ಮೇ 26 ರೊಳಗೆ ಅವರು ರಾಷ್ಟ್ರೀಯ ತಂಡವನ್ನು ಕೂಡಿಕೊಳ್ಳಬೇಕಿದೆ.

ಇದೇ ಕಾರಣದಿಂದಾಗಿ ಜೇಕಬ್ ಬೆಥೆಲ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯಗಳ ಬಳಿಕ ತವರಿಗೆ ಹಿಂತಿರುಗಲಿದ್ದಾರೆ. ಅಲ್ಲದೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ದದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಹಾಗೆಯೇ ಪ್ಲೇಆಫ್ ಸುತ್ತಿನಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿದು ಬಂದಿದೆ.

ಇದೀಗ ಕೆಕೆಆರ್ ಹಾಗೂ ಎಸ್ಆರ್ಹೆಚ್ ಪಂದ್ಯಗಳಿಗೆ ಮಾತ್ರ ಲಭ್ಯರಿರುವ ಜೇಕಬ್ ಬೆಥೆಲ್ ಬದಲಿಗೆ ಆರ್ಸಿಬಿ ಮತ್ತೋರ್ವ ಆಟಗಾರನ ಆಯ್ಕೆಯನ್ನು ಸಹ ಎದುರು ನೋಡುತ್ತಿದೆ. ಅಂದರೆ ಬೆಥೆಲ್ 2 ಪಂದ್ಯಗಳ ಬಳಿಕ ತವರಿಗೆ ಹಿಂತಿರುಗಿದರೆ, ಅವರ ಸ್ಥಾನದಲ್ಲಿ ಬೇರೊಬ್ಬ ಬ್ಯಾಟರ್ನನ್ನು ಬದಲಿಯಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ.

ಏಕೆಂದರೆ ಇತ್ತ ತಂಡದಲ್ಲಿರುವ ಆರಂಭಿಕ ದಾಂಡಿಗ ಫಿಲ್ ಸಾಲ್ಟ್ ಫಾರ್ಮ್ನಲ್ಲಿಲ್ಲ. ಅಲ್ಲದೆ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದೀಗ ಅವರು ಆರ್ಸಿಬಿ ತಂಡದ ಉಳಿದ ಪಂದ್ಯಗಳಿಗೆ ಹಿಂತಿರುಗಲಿದ್ದಾರಾ? ಎಂಬುದೇ ಪ್ರಶ್ನೆ. ಒಂದು ವೇಳೆ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದರೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್ ಕಣಕ್ಕಿಳಿಯುವುದನ್ನು ನಿರೀಕ್ಷಿಸಬಹುದು.

ಒಟ್ಟಿನಲ್ಲಿ ಐಪಿಎಲ್ ವೇಳಾಪಟ್ಟಿ ಬದಲಾವಣೆಯಿಂದಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಮಸ್ಯೆ ಎದುರಾಗಿದೆ. ಅದರಲ್ಲೂ ಜೋಶ್ ಹ್ಯಾಝಲ್ವುಡ್ ಗಾಯದ ಕಾರಣ ಹೊರಗುಳಿದರೆ, ಇದೀಗ ಜೇಕಬ್ ಬೆಥೆಲ್ ಮುಂದಿನ ಸರಣಿಗಾಗಿ ತವರಿಗೆ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಇಬ್ಬರು ಪ್ರಮುಖ ಆಟಗಾರರ ಅಲಭ್ಯತೆಯ ನಡುವೆ ಆರ್ಸಿಬಿ ಹೇಗೆ ಪ್ರದರ್ಶನ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.