
ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಸಕ್ರಿಯವಾಗಿರುವ ಕಾರುಣ್ಯ ರಾಮ್ ಅವರು ಒಂದಷ್ಟು ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ. ಅದಕ್ಕೆ ಇಲ್ಲಿದೆ ಒಂದು ಲೇಟೆಸ್ಟ್ ಉದಾಹರಣೆ. ಅಂಗಾಂಗ ದಾನ ಶಿಬಿರದಲ್ಲಿ ಭಾಗಿಯಾಗಿ ಅವರು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಮತ್ತು ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಇಂದು (ಸೆಪ್ಟೆಂಬರ್ 25) ಅಂಗಾಂಗ ದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ನಟ ಧ್ರುವ ಸರ್ಜಾ ಅವರು ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.

ದೀಪ ಬೆಳಗುವ ಮೂಲಕ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ನಟಿ ಕಾರುಣ್ಯ ರಾಮ್ ಅವರು, 'ಅಂಗಾಗ ದಾನ ಮಾಡಿದರೆ ನಮ್ಮ ಮರಣದ ನಂತರವೂ ನಮ್ಮ ಉಪಯೋಗ ಆಗುತ್ತದೆ. ಈ ಕಾರ್ಯದಿಂದ ಪುಣ್ಯ ಸಿಗುತ್ತದೆ. ಹಾಗಾಗಿ ಎಲ್ಲರೂ ಅಂಗಾಗ ದಾನ ಮಾಡಿ' ಎಂದು ಮನವಿ ಮಾಡಿದರು.

ಧ್ರುವ ಸರ್ಜಾ ಕೂಡ ಈ ಬಗ್ಗೆ ಮಾತನಾಡಿದರು. 'ಅನೇಕರಿಗೆ ನಾವು ಯೂಸ್ ಲೆಸ್ ಅಂತ ಹೇಳುತ್ತೇವೆ. ಆದರೆ ಯಾರೂ ಕೂಡ ಯೂಸ್ ಲೆಸ್ ಅಲ್ಲ. ಯೂಸ್ಡ್ ಲೆಸ್ ಅಷ್ಟೇ! ಅಂಗಾಂಗ ದಾನ ಮಾಡಿದರೆ ಮತ್ತೊಬ್ಬರಿಗೆ ಉಪಯೋಗ ಆಗುತ್ತೆ. ನಾವು ಸತ್ತ ಬಳಿಕವೂ ಮತ್ತೊಬ್ಬರಿಗೆ ಹೆಲ್ಪ್ ಆಗುತ್ತೆ. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಎಲ್ಲ ಕಡೆ ಇಂಥ ಶಿಬಿರ ಮಾಡಬೇಕು' ಎಂದು ಅವರ ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಂದಾಜು 700ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು ಎಂಬುದು ವಿಶೇಷ. ಈ ಕಾರ್ಯಕ್ರಮದಲ್ಲಿ ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್ ಜೊತೆ ಹೆಲ್ತ್ ಆ್ಯಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು ಭಾಗಿ ಆಗಿದ್ದರು.