ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್-2022 ರ ಎರಡು ಫೈನಲಿಸ್ಟ್ ತಂಡಗಳನ್ನು ನಿರ್ಧರಿಸಲಾಗಿದೆ. ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವು ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾವನ್ನು ಎದುರಿಸಲಿದೆ. ಫುಟ್ಬಾಲ್ ವಿಶ್ವಕಪ್ ಎಂಬುದು ಒಂದು ಹಣದ ಮಳೆಯಾಗುವ ಕೀಡ್ರಾಕೂಟ. ಹೀಗಾಗಿ ಈ ಈ ವಿಶ್ವಕಪ್ ಗೆಲ್ಲುವ ತಂಡಕ್ಕೆ ಭಾರೀ ಮೊತ್ತದ ಬಹುಮಾನವೇ ಸಿಗಲಿದೆ. ಅದು ಎಷ್ಟು ಎಂಬುದರ ವಿವರ ಇಲ್ಲಿದೆ.
ಫ್ರಾನ್ಸ್ ಅಥವಾ ಅರ್ಜೆಂಟೀನಾ, ಈ ವಿಶ್ವಕಪ್ ಗೆಲ್ಲುವ ತಂಡಕ್ಕೆ 42 ಮಿಲಿಯನ್ ಡಾಲರ್ ಅಂದರೆ ಅಂದಾಜು 344 ಕೋಟಿ ರೂ. ಹಣ ಬಹುಮಾನದ ರೂಪದಲ್ಲಿ ಸಿಗಲಿದೆ.
ಮತ್ತೊಂದೆಡೆ, ರನ್ನರ್-ಅಪ್ ಆಗುವ ತಂಡಕ್ಕೆ 30 ಮಿಲಿಯನ್ ಅಂದರೆ ಸುಮಾರು 245 ಕೋಟಿ ರೂ. ಬಹುಮಾನ ಸಿಗಲಿದೆ. ಹಾಗೆಯೇ ಮೂರನೇ ಸ್ಥಾನ ಪಡೆದುಕೊಂಡಿರುವ ಕ್ರೊಯೇಷಿಯಾ 27 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 220 ಕೋಟಿ ರೂ. ಸಂಭಾವನೆ ಪಡೆದರೆ, ನಾಲ್ಕನೇ ಸ್ಥಾನದಲ್ಲಿರುವ ಮೊರಾಕೊ 25 ಮಿಲಿಯನ್ ಡಾಲರ್ ಅಂದರೆ ಸುಮಾರು 204 ಕೋಟಿ ರೂ. ಹಣವನ್ನು ಬಹುಮಾನವನ್ನಾಗಿ ಪಡೆಯಲಿದೆ.
ಐದರಿಂದ ಎಂಟನೇ ಸ್ಥಾನ ಪಡೆಯುವ ತಂಡಗಳು 17 ಮಿಲಿಯನ್ ಡಾಲರ್ ಅಂದರೆ ಸುಮಾರು 138 ಕೋಟಿ ರೂ. ಸಂಭಾವನೆ ಪಡೆದರೆ, ಅದೇ ಸಮಯದಲ್ಲಿ, ಎಂಟರಿಂದ 16 ನೇ ಶ್ರೇಯಾಂಕದ ತಂಡಗಳಿಗೆ 13 ಮಿಲಿಯನ್ ಡಾಲರ್, ಅಂದರೆ ಭಾರತೀಯ ರೂಪಾಯಿಯಲ್ಲಿ 106 ಕೋಟಿ ರೂ. ಸಿಗಲಿದೆ. ನೆದರ್ಲ್ಯಾಂಡ್ಸ್ ಐದನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ಆರನೇ ಸ್ಥಾನದಲ್ಲಿದೆ. ಹಾಗೆಯೇ ಬ್ರೆಜಿಲ್ ಏಳನೇ ಮತ್ತು ಪೋರ್ಚುಗಲ್ ಎಂಟನೇ ಸ್ಥಾನ ಪಡೆದುಕೊಂಡಿದೆ.
ಫಿಫಾ ವಿಶ್ವಕಪ್-2022 ರಲ್ಲಿ ತಂಡಗಳಿಗೆ ಬಹುಮಾನವಾಗಿ ನೀಡಿದ ಸಂಪೂರ್ಣ ಮೊತ್ತವನ್ನು ನೋಡಿದರೆ, ಅದು 440 ಮಿಲಿಯನ್ ಡಾಲರ್ ಆಗಲಿದೆ. ಅದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸುಮಾರು 3600 ಕೋಟಿ ರೂ. ಆಗಲಿದೆ.