ಅದು ದಶಕಗಳ ಕಾಲ ರಾಜನಾಗಿ ಮೆರೆದಾಡಿದ್ದ ಒಂಟಿ ಸಲಗ. ಆ ಸಲಗ ಮತ್ತು ಊರಿನ ಜನರ ಮಧ್ಯೆ ನಿರಂತರ ಸಂಘರ್ಷ ನಡೆದಿತ್ತು. ಆತನ ಪರಾಕ್ರಮಕ್ಕಾಗಿ ಆ ಊರಿನ ಜನರು ಅವನಿಗೆ ಕಾಜೂರು ಕರ್ಣ ಅಂತಾನೇ ನಾಮಕರಣ ಮಾಡಿದ್ದರು. ಆದರೆ ಕರ್ಣನನ್ನ ಸೆರೆ ಹಿಡಿದ ಅರಣ್ಯಾಧಿಕಾರಿಗಳಿಗೆ ಶಾಕ್ ಕಾದಿತ್ತು. ಏಕೆಂದರೆ ಆತನ ದೇಹದ ತುಂಬೆಲ್ಲಾ ಬರೀ ಗುಂಡೇಟುಗಳೇ ತುಂಬಿದ್ದು, ಆತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಗ್ರಾಮದ ಅರಣ್ಯ ಮತ್ತು ಕಾಫಿ ತೋಟದಲ್ಲೇ ಕಳೆದ ಹತ್ತಾರು ವರ್ಷಗಳಿಂದ ಅಡ್ಡಾಡುತ್ತಿದ್ದ. ಈತನ ದೈತ್ಯ ಗಾತ್ರ, ಪರಾಕ್ರಮ ನೋಡಿ ಉರಿನ ಜನರು ಈತನಿಗೆ ಕಾಜೂರು ಕರ್ಣ ಅಂತಾನೇ ನಾಮಕರಣ ಮಾಡಿದ್ದರು. ಮಡಿಕೇರಿ ಸೋಮವಾತರಪೇಟೆ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಈ ಕರ್ಣ ಚಿರಪರಿಚಿತನಾಗಿದ್ದ. ಆದರೆ ಪದೇ ಪದೇ ಮನುಷ್ಯರು ಹಾಗೂ ವಾಹನಗಳ ಮೇಲೆ ದಾಳಿ ದಾಂಧಲೆ ಮಾಡ್ತಾ ಇದ್ದುದರಿಂದ ಇದೇ ಫೆಬ್ರುವರಿ 3 ರಂದು ಈ ಕಾಡಾನೆಯನ್ನ ಸೆರೆಹಿಡಿಯಲಾಗಿತ್ತು.
ಸೆರೆ ಹಿಡಿದ ಬಳಿಕ ಕಂಡುಬಂದಿದ್ದು ಮಾತ್ರ ಹೃದಯ ವಿದ್ರಾವಕ ದೃಶ್ಯ. ಈತನ ಮೇಲೆಲ್ಲಾ ಕೇವಲ ಗುಂಡೇಟುಗಳೇ ತುಂಬಿವೆ. ಅದ್ರಲ್ಲೂ ಕಾಡಾನೆಯ ಎರಡೂ ಕಾಲುಗಳಿಗೆ ಗುಂಡೇಟಿನಿಂದ ಆಳ ಗಾಯವಾಗಿದೆ. ಸದ್ಯ ಎರಡು ಗುಂಡುಗಳನ್ನ ಕಾಲಿನಿಂದ ಹೊರ ತೆಗೆಯಲಾಗಿದೆ. ಪಶುವೈದ್ಯಾಧಿಕಾರಿ ಡಾ ಚಿಟ್ಟಿಯಪ್ಪ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಿರಂತರ ಚಿಕಿತ್ಸೆ ಮುಂದುವರಿಸಿದ್ದಾರೆ.
ಸದ್ಯ ಕಾಜೂರು ಕರ್ಣ ದುಬಾರೆಯ ಕ್ರಾಲ್ನಲ್ಲಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕ್ರಾಲನ್ನೊಳಗೆ ಇರುವುದರಿಂದ ಗಾಯಕ್ಕೆ ಚಿಕಿತ್ಸೆ ನೀಡುವುದು ಬಹಳ ಕಷ್ಟವಾಗುತ್ತಿದೆ. ಅದರಲ್ಲೂ ಒಂದು ಕಾಲಿನಿಂದ ಬಕೆಟ್ನಷ್ಟು ಕೀವು ಹೊರ ಬಂದಿದೆ. ಇದು ಕಾಡು ನಾಡಿನಲ್ಲಿ ಅಲೆದಾಡಿ ದಾಂಧಲೆ ಮಾಡುವಾಗ ಬಹುಶಃ ಯಾರೋ ಸ್ಥಳೀಯರೇ ಇದಕ್ಕೆ ನಿರಂತರ ಗುಂಡು ಹೊಡೆದಿದ್ದಾರೆ. ಹಾಗಾಗಿ ಮೈಮೇಲೆ ಎಲ್ಲಾ ಕಡೆ ಗುಂಡೇಟಿನ ಗುರುಗತುಗಳೇ ತುಂಬಿವೆ ಎನ್ನಲಾಗುತ್ತಿದೆ.
ಕಾಡಾನೆ ಕೇವಲ ಆಹಾರಕ್ಕಾಗಿ ಮಾತ್ರ ಕಾಡಿನಿಂದ ಬರುತ್ತವೆ. ತಮಗೆ ಅಪಾಯ ಇಲ್ಲ ಎಂದು ತಿಳಿದರೆ ಅದು ಯಾರ ತಂಟೆಗೂ ಹೋಗುವುದಿಲ್ಲ. ಆದರೆ ಸಾಮಾನ್ಯವಾಗಿ ಕಾಡಾನೆಯೊಂದು ನಾಡಿನತ್ತ ಆಗಮಿಸಿದಾಗ ಅದನ್ನ ಉದ್ರೇಕಿಸಿ, ಬೆದರಿಸಿ ಓಡಿಸಲಾಗುತ್ತದೆ. ಹಾಗಾಗಿಯೇ ಅದು ದಾಂಧಲೆ ಮಾಡುತ್ತವೆ. ಈ ಸಂದರ್ಭ ದುಷ್ಕರ್ಮಿಗಳು ಅದರ ಮೇಲೆ ಗುಂಡು ಹೊಡೆಯುತ್ತಾರೆ. ದಯವಿಟ್ಟು ಆ ರೀತಿ ಮಾಡಬೇಡಿ ಎಂದು ಅರಣ್ಯಾಧಿಕಾರಿ ಕನ್ನಂಡ ರಂಜನ್ ಮನವಿ ಮಾಡಿದ್ದಾರೆ.
ಒಂದು ವೇಳೆ ಈ ಕರ್ಣನನ್ನ ಸೆರೆ ಹಿಡಿದು ಚಿಕಿತ್ಸೆ ನೀಡದೇ ಇದ್ದಿದ್ದಲ್ಲಿ ಇಷ್ಟರಲ್ಲಾಗಲೇ ಅದು ಕೊನೆಯುಸಿರೆಳೆಯುತ್ತಿತ್ತು. ಸದ್ಯ ಅದನ್ನ ಸೆರೆ ಹಿಡಿದು ದುಬಾರೆ ಶಿಬಿರದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯಾಧಿಕಾರಿಗಳ ಪ್ರಯತ್ನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.