
ಕಾಫಿ ಕಣಿವೆ, ಹಾಕಿ ತವರು, ಮಂಜಿನ ನಗರಿ ಎಂದೆಲ್ಲಾ ಫೇಮಸ್ ಆಗಿರುವ ಕೊಡಗು ಜಿಲ್ಲೆಯ ಮತ್ತೊಂದು ಹೆಗ್ಗಳಿಕೆ ಅಂದರೆ ಕೋವಿ ಹಬ್ಬ. ಈ ದಕ್ಷಿಣದ ಕಾಶ್ಮೀರದ ಮೂಲನಿವಾಸಿಗಳು ಕೋವಿ ಪ್ರಿಯರು. ಹಾಗಾಗಿ ಇಲ್ಲಿ ಪ್ರತಿ ವರ್ಷ ಕೋವಿ ಹಬ್ಬ ಮಾಡಲಾಗುತ್ತದೆ. ಆ ಹಬ್ಬದ ಒಂದು ಝಲಕ್ ಇಲ್ಲಿದೆ ನೋಡಿ.

ಕೊಡಗಿನಲ್ಲಿ ನೂರಾರು ವರ್ಷಗಳಿಂದ ಬಂದೂಕನ್ನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಪೂಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಕೊಡಗು ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡು ಸಮೀಪ ಗನ್ ಕಾರ್ನಿವಲ್ ಆಯೋಜಿಸಲಾಗಿತ್ತು.

ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದ ಜನರು ತಮ್ಮ ವಿವಿಧ ಕೋವಿಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಕೊಡಗಿನ ಮದುವೆಗಳಲ್ಲಿ ಕಂಡು ಬರು ಸಾಂಪ್ರದಾಯಿಕ ಬಾಳೆ ಕಡಿಯುವ ಪದ್ಧತಿ ಆಚರಿಸಿ ಸಂಭ್ರಮಿಸಿದರು.

ಕೊಡಗು ಜಿಲ್ಲೆಯ ಮೂಲನಿವಾಸಿಗಳು ಪ್ರಕೃತಿಯ ಆರಾಧಕರು. ಇವರ ಹಬ್ಬ-ಹರಿದಿನಗಳು ಪ್ರಕೃತಿಯೊಂದಿಗೆ ನಂಟು ಹೊಂದಿರುತ್ತವೆ. ವಾರದ ಹಿಂದಷ್ಟೇ ಹುತ್ತರಿ ಹಬ್ಬ ಕೂಡ ನೆರವೇರಿತ್ತು. ಇದರ ಬೆನ್ನಲ್ಲೇ ಇದೀಗ ಬಂದೂಕು ಪೂಜಿಸುವ ಮೂಲಕ ಹಬ್ಬ ಆಚರಿಸುತ್ತಾರೆ.

ಬಂದೂಕನ್ನು ಬರೀ ಪೂಜಿಸುವುದಷ್ಟೇ ಅಲ್ಲದೆ, ತೆಂಗಿನ ಕಾಯಿಗೆ ಗುಂಡು ಹೊಡೆದು ಬಹುಮಾನ ಗೆದ್ದು ಸಂಭ್ರಮಿಸಿದರು. ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಗುರಿ ಇಟ್ಟು ಗುಂಡು ಹೊಡೆದು ತಾವೇನು ಕಡಿಮೆ ಇಲ್ಲ ಎಂದು ನಿರೂಪಿಸಿದರು.

ಇನ್ನು ವಿಶೇಷ ಅಂದರೆ ಇಡೀ ದೇಶದಲ್ಲಿ ಕೊಡಗಿನ ಪ್ರತಿಯೊಬ್ಬ ಮೂಲನಿವಾಸಿಗಳಿಗೆ ಮಾತ್ರ ಬಂದೂಕು ಹೊಂದುವ ವಿಶೇಷ ಅಧಿಕಾರ ಮತ್ತು ಹಕ್ಕನ್ನು ನೀಡಲಾಗಿದೆ. ಹಿಂದೆ ಬ್ರಿಟಿಷರ ಅವಧಿಯಲ್ಲಿ ಈ ಹಕ್ಕು ಕೊಡಗಿನ ಜನರಿಗೆ ನಿಡಲಾಗಿದ್ದು, ಅದು ಇಂದಿಗೂ ಮುಂದುವರೆದಿರುವುದು ವಿಶೇಷ.