- Kannada News Photo gallery Cricket photos CSK IPL 2026: Sanju, Karthik Signings Hint at Dhoni's Final Season
IPL 2026: ಇಬ್ಬರು ವಿಕೆಟ್ಕೀಪರ್ಗಳನ್ನು ಖರೀದಿಸಿದ ಸಿಎಸ್ಕೆ; ಐಪಿಎಲ್‌ನಲ್ಲಿ ಧೋನಿ ಯುಗಾಂತ್ಯ?
MS Dhoni retirement: ಕಳೆದ ಎರಡು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನದ ನಂತರ, CSK 2026ರ ಐಪಿಎಲ್‌ಗಾಗಿ ಬಲಿಷ್ಠ ತಂಡವನ್ನು ಕಟ್ಟಿದೆ. ಸಂಜು ಸ್ಯಾಮ್ಸನ್, ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ಸೇರಿಸಿಕೊಂಡಿದೆ. ಇಬ್ಬರು ವಿಕೆಟ್ ಕೀಪರ್‌ಗಳ ಆಗಮನವು ಧೋನಿಯ ನಿವೃತ್ತಿ ವದಂತಿಗಳಿಗೆ ಪುಷ್ಟಿ ನೀಡಿದೆ. ರಾಬಿನ್ ಉತ್ತಪ್ಪ ಕೂಡ ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಆಗಿರಬಹುದು ಎಂದು ಹೇಳಿದ್ದು, ಹೊಸ ವಿಕೆಟ್ ಕೀಪರ್‌ಗೆ ದಾರಿ ಮಾಡಿಕೊಡಬಹುದು.
Updated on: Dec 18, 2025 | 8:56 AM

ಕಳೆದ ಎರಡು ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 2026 ರ ಐಪಿಎಲ್ಗೆ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುವ ಸಿದ್ಧತೆ ಮಾಡಿಕೊಂಡಿದೆ. ಅದರಂತೆ ಮಿನಿ ಹರಾಜಿನಲ್ಲಿ ಪ್ರತಿಭಾವಂತ ಆಟಗಾರರನ್ನು ಖರೀದಿಸಿರುವ ಸಿಎಸ್ಕೆ ಎಲ್ಲಾ ವಿಭಾಗಗಳು ಬಲಿಷ್ಠವಾಗಿ ಕಾಣುತ್ತಿದೆ.

ಮಿನಿ ಹರಾಜಿಗೂ ಮುನ್ನ ಟ್ರೆಡಿಂಗ್ ವಿಂಡೋ ಮೂಲಕ ಟೀಂ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಸಿಎಸ್ಕೆ ಇದೀಗ ಮಿನಿ ಹರಾಜಿನಲ್ಲಿ ಇಬ್ಬರು ದೇಶಿ ಸೂಪರ್ಸ್ಟಾರ್ಗಳಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ತಲಾ 14.2 ಕೋಟಿ ರೂ. ನೀಡಿ ಖರೀದಿಸಿದೆ.

ಅದರಲ್ಲೂ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾರ್ತಿಕ್ ಶರ್ಮಾ ಅವರನ್ನು ಇಷ್ಟೊಂದು ದುಬಾರಿ ಮೊತ್ತಕ್ಕೆ ಖರೀದಿಸಿರುವುದು ಐಪಿಎಲ್‌ನಲ್ಲಿ ಇದು ಧೋನಿಯ ಕೊನೆಯ ಆವೃತ್ತಿ ಎಂದು ಕೇಳಿಬರುತ್ತಿರುವ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಪ್ರಸ್ತುತ ಸಿಎಸ್ಕೆ ತಂಡದಲ್ಲಿ ಧೋನಿ, ಸಂಜು ಸ್ಯಾಮ್ಸನ್, ಹಾಗೂ ಕಾರ್ತಿಕ್ ಶರ್ಮಾ ರೂಪದಲ್ಲಿ ಮೂವರು ವಿಕೆಟ್ ಕೀಪರ್ಗಳಿದ್ದಾರೆ.

ಧೋನಿಯ ನಿವೃತ್ತಿಗೂ ಮುನ್ನ ಒಬ್ಬ ಅತ್ಯುತ್ತಮ ವಿಕೆಟ್ ಕೀಪರ್ ಅನ್ನು ಹುಡುಕುವ ಯತ್ನದಲ್ಲಿ ಸಿಎಸ್ಕೆ ಇದೆ ಎಂಬುದನ್ನು ಇದರಿಂದಲೇ ಅರಿತುಕೊಳ್ಳಬಹುದು. ಇವರಿಬ್ಬರ ಸಂಜು ಹಾಗೂ ಕಾರ್ತಿಕ್ ಆಗಮನದಿಂದಾಗಿ ಧೋನಿಯ ಕೆಲಸ ಕಡಿಮೆಯಾಗಲಿದ್ದು, ಈ ಆವೃತ್ತಿಯಲ್ಲಿ ಧೋನಿ ಬದಲು ಇವರಿಬ್ಬರಲ್ಲಿ ಒಬ್ಬರು ವಿಕೆಟ್ಕೀಪಿಂಗ್ ಮಾಡುವ ಸಾಧ್ಯತೆ ಇದೆ. ಉಳಿದಂತೆ ಧೋನಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಬಹುದು.

ಧೋನಿ ನಿವೃತ್ತಿ ಸುದ್ದಿಗೆ ಪೂರಕವಾಗಿ ಸಿಎಸ್ಕೆ ತಂಡದ ಪರ ವರ್ಷಗಳ ಕಾಲ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಇದು ಧೋನಿಯ ಕೊನೆಯ ಐಪಿಎಲ್ ಎಂದು ಹೇಳಿದ್ದಾರೆ. ಮಿನಿ ಹರಾಜು ನಡೆದ ದಿನ ಈ ಬಗ್ಗೆ ಮಾತನಾಡಿದ ಉತ್ತಪ್ಪ, ‘ಚಿತ್ರ ಸ್ಪಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಧೋನಿಯ ಕೊನೆಯ ಸೀಸನ್ ಆಗಿರುತ್ತದೆ ಎಂಬುದು ಸ್ಪಷ್ಟವಾಗಿದೆ. ಮುಂದಿನ ಸೀಸನ್‌ನಲ್ಲಿ ಧೋನಿ ಆಡುವ ಬಗ್ಗೆ ಈಗ ಯಾವುದೇ ಊಹಾಪೋಹ ಅಥವಾ ಚರ್ಚೆ ಇಲ್ಲ. 2026 ರ ಸೀಸನ್‌ನಲ್ಲಿ ಆಡಿದ ನಂತರ ಧೋನಿ ನಿವೃತ್ತಿ ಹೊಂದುತ್ತಾರೆ’ ಎಂದಿದ್ದಾರೆ.
