
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯಿರೋ ಋಷ್ಯಮುಕ, ಕೊಪ್ಪಳ ತಾಲೂಕಿನ ಹುಲಗಿಯಲ್ಲಿರುವ ಸುಪ್ರಸಿದ್ದ ಹುಲಿಗೆಮ್ಮ ದೇವಸ್ಥಾನದಲ್ಲಿ ಅನೇಕ ಕಡೆ ಅಂಗಡಿಗಳು, ಸ್ನಾನಘಟ್ಟಗಳು ಜಲಾವೃತಗೊಂಡಿವೆ. ಇನ್ನು ಹಲವಡೆ ನಡುಗಡ್ಡೆಗಳಿದ್ದು, ನಡುಗಡ್ಡೆಯಲ್ಲಿರೋ ಜನರಿಗೆ, ಹೆಚ್ಚುತ್ತಿರುವ ನೀರಿನ ಪ್ರಮಾಣ ಆತಂಕ ಹುಟ್ಟಿಸಿದೆ.

ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಬಿಟ್ಟೂಬಿಡದೇ ಮಳೆ ಸುರಿಯುತ್ತಿದೆ. ಇದರಿಂದ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯಿರೋ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಡ್ಯಾಂ ನಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ. ತುಂಗಭದ್ರಾ ಜಲಾಶಯಕ್ಕೆ ಒಂದುವರೆ ಲಕ್ಷ ಕ್ಯೂಸೆಕ್ ಗೂ ಹೆಚ್ಚು ಒಳಹರಿವು ಇರೋದರಿಂದ, ಸದ್ಯ ಡ್ಯಾಂನಲ್ಲಿ ನೀರು ಸಂಗ್ರಹಮಾಡದೇ ನೇರವಾಗಿ ನದಿಗೆ ಬಿಡಲಾಗುತ್ತಿದೆ.

ಇಷ್ಟು ದಿನ ಡ್ಯಾಂಗೆ ಹರಿದು ಬರ್ತಿದ್ದ ನೀರನ್ನು ನೋಡಿ ಸಂತಸಪಟ್ಟಿದ್ದ ಡ್ಯಾಂ ಕೆಳಬಾಗದ ಜನರು, ಇದೀಗ ಸಂಕಷ್ಟ ಪಡುವಂತಾಗಿದೆ. ಅನೇಕ ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಪ್ಪಳ ತಾಲೂಕಿನ ಹುಲಗಿಯಲ್ಲಿರುವ ಸುಪ್ರಸಿದ್ದ ಹುಲಿಗೆಮ್ಮ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇನ್ನೊಂದಡೆ ನದಿ ದಡದಲ್ಲಿರುವ ಕೇಶಮುಂಡನ ಮಾಡೋ ಕೋಣೆ ಕೂಡಾ ಜಲಾವೃತಗೊಂಡಿದೆ. ಇನ್ನು ನೀರಿನ ಪ್ರಮಾಣ ಹೆಚ್ಚಾದ್ರೆ ಅನೇಕ ಅಂಗಡಿಗಳು ಕೂಡಾ ಸಂಪೂರ್ಣವಾಗಿ ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ನದಿಗೆ ಭಕ್ತರ ಸ್ನಾನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿಯುವ ಪಾತ್ರದಲ್ಲಿ ಅನೇಕ ನಡುಗಡ್ಡೆಗಳಿವೆ. ಅನೇಕ ಐತಿಹಾಸಿಕ ಸ್ಥಳಗಳು ಇವೆ. ಐತಿಹಾಸಿಕ ಸ್ಥಳಗಳು ಜಲಾವೃತಗೊಂಡಿದ್ದರೆ, ನಡುಗೆಡ್ಡೆಯಲ್ಲಿರುವ ಜನರಿಗೆ ಇದೀಗ ಸಂಕಷ್ಟ ಆರಂಭವಾಗಿದೆ. ಹೌದು ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿಯಿರೋ ಐತಿಹಾಸಿಕ ಋಷ್ಯಮುಖ ಪರ್ವತದಲ್ಲಿ ಹರಿದಾಸ್ ಬಾಬಾ, ಆನಂದಗಿರಿ ಬಾಬಾ ಸೇರಿ ನಾಲ್ವರು ವಾಸವಾಗಿದ್ದಾರೆ. ಪರ್ವತದಲ್ಲಿರುವ ರಾಮ, ಸೀತೆ, ಆಂಜನೇಯ ದೇವರ ದೇವಸ್ಥಾನಗಳಿಗೆ ಪೂಜೆ ಸಲ್ಲಿಸುವ ಇವರೆಲ್ಲಾ ಪರ್ವತದಲ್ಲಿಯೇ ವಾಸವಿದ್ದಾರೆ. ಆದರೆ ಇದೀಗ ಇಡೀ ಪರ್ವತವನ್ನು ತುಂಗಭದ್ರಾ ನದಿ ನೀರು ಆವರಿಸಿಕೊಂಡಿದೆ. ಹೀಗಾಗಿ ನಡುಗಡ್ಡೆಯಲ್ಲಿರುವ ನಾಲ್ವರಿಗೆ ಆತಂಕ ಆರಂಭವಾಗಿದೆ. ನೀರಿನ ಪ್ರಮಾಣ ಇನ್ನು ಹೆಚ್ಚಾದ್ರೆ ರುಷ್ಯಮುಖ ಪರ್ವತಕ್ಕೆ ನೀರು ನುಗ್ಗುವ ಆತಂಕ ಎದುರಾಗಿದೆ. ಸದ್ಯ ತಮಗೆ ಯಾವುದೇ ಸಮಸ್ಯೆ ಇಲ್ಲ. ಎರಡು ತಿಂಗಳಿಗೆ ಆಗುವಷ್ಟು ನಮ್ಮಲ್ಲಿ ದವಸ ಧಾನ್ಯಗಳು ಇವೆ. ನಾವು ಇಲ್ಲಿಯೇ ಸುರಕ್ಷಿತವಾಗಿದ್ದೇವೆ ಅಂತ ನಡುಗಡ್ಡೆಯಲ್ಲಿರುವ ಬಾಬಾಗಳು ಹೇಳುತ್ತಿದ್ದಾರೆ. ಆದರೆ ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಅವರು ಹೊರಗೆ ಬರೋದು ಕಷ್ಟವಾಗಲಿದೆ.

ಮಲೆನಾಡಿನಲ್ಲಿ ಮಳೆ ಹೀಗೆಯೇ ಮುಂದುವರಿದರೆ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಇದರಿಂದ ಡ್ಯಾಂ ಕೆಳೆಬಾಗದಲ್ಲಿರೋ ಜನರಿಗೆ ಆತಂಕ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಡುಗಡ್ಡೆಯಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವುದು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.