ಅತ್ತ ಪ್ರಯಾಗರಾಜ್ನ ಕುಂಭಮೇಳದಲ್ಲಿ ಕೋಟಿ ಕೋಟಿ ಜನರು ಭಾಗಿಯಾಗುತ್ತಿದ್ದರೆ, ಇತ್ತ ದಕ್ಷಿಣ ಭಾರತದ ಕುಂಭಮೇಳ ಅಂತ ಖ್ಯಾತಿ ಪಡೆದಿರುವ ಕೊಪ್ಪಳ ಗವಿಮಠದ ಜಾತ್ರೆಗೆ ಅದ್ದೂರಿ ತೆರೆ ಬಿದ್ದಿದೆ. ಇನ್ನು ಕಳೆದ ಹದಿನೈದು ದಿನಗಳಿಂದ ನಡೆದ ಜಾತ್ರೆಯಲ್ಲಿ ಸರಿಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ದಾಸೋಹದಲ್ಲಿ ಊಟ ಮಾಡಿದ್ದಾರೆ.
ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ, ಜಾತ್ರೆಯಲ್ಲಿ ಭಾಗಿಯಾಗುವ ಲಕ್ಷ ಲಕ್ಷ ಜನರು. ಇದೇ ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆದಿತ್ತು. ಅಂದು ಸರಿಸುಮಾರು ಐದು ಲಕ್ಷ ಜನ ಭಾಗಿಯಾಗಿದ್ದರು. ಜನವರಿ 15 ರಿಂದ ಆರಂಭವಾಗಿದ್ದ ಜಾತ್ರೆಗೆ ಇಂದು ವಿದ್ಯುಕ್ತ ತೆರೆ ಬಿದ್ದಿದೆ.
ಇನ್ನು ಗವಿಮಠದ ಜಾತ್ರೆಯ ವಿಶೇಷವೆಂದರೆ ಅದು ದಾಸೋಹ. ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಕೂಡ ಇಂದು ತೆರೆಬಿದ್ದಿದೆ. ಇಂದು ಕೂಡ ಲಕ್ಷಕ್ಕೂ ಅಧಿಕ ಜನರು ಮಹಾ ದಾಸೋಹದಲ್ಲಿ ಪ್ರಸಾದ ಸೇವಿಸಿದರು. ಇಂದು ಕೊನೆಯ ದಿನ್ನ ಹಿನ್ನೆಲೆಯಲ್ಲಿ ಗೋದಿ ಹುಗ್ಗಿ, ಅನ್ನ, ಸಾರು, ಬದನೆಕಾಯಿ ಪಲ್ಲೆಯನ್ನು ಮಾಡಲಾಗಿತ್ತು.
ಮುಂಜಾನೆ ಏಳುಗಂಟೆಯಿಂದ ರಾತ್ರಿ ಹನ್ನೆರಡುಗಂಟೆವರಗೆ ಲಕ್ಷಕ್ಕೂ ಅಧಿಕ ಜನರು ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸೇವಿಸಿದ್ದಾರೆ. ಇಂದು ಒಂದೇ ದಿನ ನೂರು ಕ್ವಿಂಟಲ್ ಅಧಿಕ ಅನ್ನ, ಎಪ್ಪತ್ತೈದು ಕ್ವಿಂಟಲ್ ಗೋದಿ ಹುಗ್ಗಿಯನ್ನು ಮಾಡಲಾಗಿತ್ತು.
ಇನ್ನು ಜನವರಿ 12 ರಿಂದಲೇ ಆರಂಭವಾಗಿದ್ದ ಮಹಾದಾಸೋಹಕ್ಕೆ ಇಂದು ತೆರೆ ಬಿದ್ದಿದ್ದು, ನಾಳೆಯಿಂದ ಮಠದಲ್ಲಿ ದೈನಂದಿನಂತೆ ದಾಸೋಹ ಇರಲಿದೆ. ಇನ್ನು ಹದಿನೆಂಟು ದಿನಗಳ ಕಾಲ ನಡೆದ ಮಹಾದಾಸೋಹದಲ್ಲಿ ಇಪ್ಪತ್ತು ಲಕ್ಷಕ್ಕೂ ಅಧಿಕ ಜನ ಪ್ರಸಾದ ಸೇವಿಸಿದ್ದಾರೆ. ಇಪ್ಪತ್ತು ಲಕ್ಷ ರೊಟ್ಟಿ ಖರ್ಚಾಗಿದ್ದು, ಹನ್ನೆರಡು ನೂರು ಕ್ವಿಂಟಲ್ ಅಕ್ಕಿ ಖರ್ಚಾಗಿದೆ. ಐನೂರು ಕ್ವಿಂಟಲ್ ಕಟ್ಟಿಗೆ ಬಳಕೆಯಾಗಿದೆ. ಹತ್ತಾರು ಟನ್ ತರಕಾರಿ ಬಳಸಲಾಗಿದೆ.
ಹತ್ತು ಲಕ್ಷಕ್ಕೂ ಅಧಿಕ ಜಿಲೇಬಿ, ಶೇಂಗಾ ಹೋಳಿಗೆ, ಮಾದಲಿ, ಮಿರ್ಚಿಯನ್ನು ಪ್ರಸಾದದಲ್ಲಿ ನೀಡಲಾಗಿತ್ತು. ಪ್ರತಿ ದಿನವು ಕೂಡ ಒಂದೊಂದು ರೀತಿಯ ಭಕ್ಷ್ಯ ಭೋಜನಗಳನ್ನು ಜಾತ್ರೆಗೆ ಬರುವ ಭಕ್ತರಿಗೆ ಮಹಾದಾಸೋಹದಲ್ಲಿ ಬಡಿಸಲಾಗಿದೆ. ಕೊಪ್ಪಳ ಗವಿಮಠದ ಜಾತ್ರೆಯಲ್ಲಿರುವಷ್ಟು ವೆರೈಟಿ ಆಹಾರ ಮತ್ತು ಲಕ್ಷ ಲಕ್ಷ ಜನರಿಗೆ ಅಚ್ಚುಕಟ್ಟು ಪ್ರಸಾದ ವ್ಯವಸ್ಥೆ ದೇಶದ ಯಾವ ಜಾತ್ರೆಯಲ್ಲಿ ಕೂಡ ಕಾಣಸಿಗಲಾರದು.
Published On - 9:08 pm, Wed, 29 January 25