Kannada News Photo gallery Koppal Shri Huligemma Devi Maharathotsava, Millions of people come from the karnataka including Andhra and Telangana kannada news
ಹುಲಿಗೆಮ್ಮ ದೇವಿಯ ಮಹಾರಥೋತ್ಸವ; ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣದಿಂದಲೂ ಬಂದ ಲಕ್ಷಾಂತರ ಭಕ್ತರು
ಅದು ಉತ್ತರ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ದ ದೇವಸ್ಥಾನ. ಆ ತಾಯಿಗೆ ಭಕ್ತಿಯಿಂದ ಬೇಡಿಕೊಂಡರೆ ಸಂಕಷ್ಟಗಳೆಲ್ಲವೂ ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಎಲ್ಲಿಯೇ ಇದ್ದರೂ ಕೂಡ ಆ ತಾಯಿಯ ಸನ್ನಿಧಿಗೆ ಜನರು ಬರೋದನ್ನು ತಪ್ಪಿಸೋದಿಲ್ಲ. ಹೌದು, ಸುಪ್ರಸಿದ್ದ ಹುಲಿಗೆಮ್ಮ ದೇವಿ ಜಾತ್ರೆ ಇಂದು ಅದ್ದೂರಿಯಾಗಿ ನಡೆಯಿತು. ಕರ್ನಾಟಕವಲ್ಲದೇ ದೇಶದ ಹಲವೆಡೆಯಿಂದ ಲಕ್ಷಾಂತರ ಭಕ್ತರು ದೇವಿಜಾತ್ರೆಯಲ್ಲಿ ಭಾಗಿಯಾಗಿ, ದೇವಿ ಕೃಪೆಗೆ ಪಾತ್ರರಾದರು.
1 / 6
ಒಂದೆಡೆ ಎಲ್ಲರ ಮನಸಳೆಯುತ್ತಿರುವ ದೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು. ಮತ್ತೊಂದಡೆ ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುತ್ತಿರುವ ಜನ ಸಾಗರ. ಹೌದು, ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿರುವ ಸುಪ್ರಸಿದ್ದ ಹುಲಿಗೆಮ್ಮ ದೇವಿಯು ಜನಸಾಗರದ ನಡುವೆ ರಥದ ಮೇಲೆ ಬರ್ತಿದ್ದರೆ, ಭಕ್ತರು ಉತ್ತುತ್ತಿ, ಬಾಳೆ ಹಣ್ಣು ಎಸೆದು, ದೇವಿಗೆ ಜೈಕಾರ ಹಾಕಿ ಪುನೀತರಾಗುತ್ತಿದ್ದರು. ರಥದ ಹತ್ತಿರ ಹೋಗಲಿಕ್ಕಾಗದೇ ಇದ್ದರೂ ಕೂಡ ದೂರದಿಂದಲೇ ನಮಸ್ಕಾರ ಮಾಡಿ, ದೇವಿ ಕೃಪೆಗೆ ಪಾತ್ರರಾಗುವ ಕೆಲಸ ಮಾಡುತ್ತಿದ್ದರು.
2 / 6
ಹುಲಿಗೆಮ್ಮ ದೇವಸ್ಥಾನ, ಉತ್ತರ ಕರ್ನಾಟಕ ಭಾಗದಲ್ಲಿಯೇ ಸುಪ್ರಸಿದ್ದ ದೇವಸ್ಥಾನವಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವಿ ದರ್ಶನಕ್ಕೆ ಬರುತ್ತಾರೆ. ಇನ್ನು ಪ್ರತಿವರ್ಷ ವೈಶಾಕ ನವಮಿಯ ದಿನ, ಹುಲಿಗೆಮ್ಮ ದೇವಿ ರಥೋತ್ಸವ ನಡೆಯುತ್ತದೆ. ಈ ವರ್ಷ ಕೂಡ ಶುಕ್ರವಾರ ದೇವಿಯ ರಥೋತ್ಸವ ಅದ್ದೂರಿಯಾಗಿ ನಡೆಯಿತು.
3 / 6
ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಬಂದಿದ್ದ ಸಾವಿರಾರು ಭಕ್ತರು, ದೇವಿ ರಥೋತ್ಸವದಲ್ಲಿ ಭಾಗಿಯಾಗಿ ದೇವಿ ಕೃಪೆಗೆ ಪಾತ್ರರಾದರು. ಇನ್ನು ನಿನ್ನೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿದ್ದು, ಜೂನ್ 3 ರವರೆಗೆ ನಡೆಯಲಿವೆ. ಹೀಗಾಗಿ ನಿನ್ನೆಯಿಂದಲೇ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಬರ್ತಿದ್ದಾರೆ. ಇಂದು ರಥೋತ್ಸವ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು.
4 / 6
ಇನ್ನು ಜಾತ್ರೆಯ ಅಂಗವಾಗಿ ದೇವಿಯ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಸಂಜೆ ಐದು ಮೂವತ್ತರ ಸಮಯದಲ್ಲಿ ದೇವಸ್ಥಾನದ ಗರ್ಭಗುಡಿಯಿಂದ ಉತ್ಸವ ಮೂರ್ತಿಯನ್ನು ರಥೋತ್ಸವದಲ್ಲಿ ತಂದು ಪ್ರತಿಷ್ಟಾಪಿಸಲಾಗಿದೆ. ದೇವಸ್ಥಾನದ ಪ್ರಾಂಗಣದಲ್ಲಿ ರಥವನ್ನು ಎಳೆದ ಭಕ್ತರು, ದೇವಿ ಕೃಪೆಗೆ ಪಾತ್ರರಾದ್ರು.
5 / 6
ಹುಲಿಗೆಮ್ಮ ದೇವಸ್ಥಾನಕ್ಕೆ ಐತಿಹಾಸಿನ ಹಿನ್ನೆಲೆಯಿದೆ. ಸರಿಸುಮಾರು ಎಂಟು ನೂರು ವರ್ಷಗಳಿಂದ ದೇವಸ್ಥಾನವಿದ್ದು, ದೇವಿಯು ಉದ್ಬವ ಮೂರ್ತಿಯಾಗಿದ್ದಾಳೆ. ಭಕ್ತಿಯಿಂದ ಬೇಡಿಕೊಂಡರೆ ಎಂತಹ ಸಂಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಅನ್ನೋ ನಂಬಿಕೆ ಜನರಲ್ಲಿದೆ. ಹೀಗಾಗಿ ಹೆಚ್ಚಿನ ಭಕ್ತರು ದೇವಸ್ಥಾನಕ್ಕೆ ಬರ್ತಾರೆ. ಜಾತಿ-ಮತಗಳನ್ನು ನೋಡದೆ, ಬಡವ ಶ್ರೀಮಂತರೆನ್ನದೇ, ಸರ್ವರು ದೇವಿಯ ಮುಂದೆ ಸಮಾನರಂತೆ ವರ್ತಿಸಿ, ದೇವಿಯ ಜಾತ್ರೆಯಲ್ಲಿ ಭಾಗಿಯಾಗುವುದು ವಿಶೇಷವಾಗಿದೆ.
6 / 6
ಅದ್ದೂರಿಯಾಗಿ ನಡೆದ ಹುಲಿಗೆಮ್ಮ ದೇವಿ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿ ದೇವಿ ದರ್ಶನ ಪಡೆದರು. ಇನ್ನು ಒಂದು ವಾರಗಳ ಕಾಲ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಬಂದು ದೇವಿ ಕೃಪೆಗೆ ಪಾತ್ರರಾಗುತ್ತಾರೆ. ಜಾತಿ-ಬೇಧಗಳನ್ನು ಮರೆತು, ಸರ್ವಧರ್ಮಗಳ ಸಮನ್ವಯತೆಯೊಂದಿಗೆ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
Published On - 7:21 pm, Fri, 31 May 24