Lionel Messi: ಹೊಸ ಕ್ಲಬ್ ಪರ ಕಣಕ್ಕಿಳಿಯಲಿದ್ದಾರೆ ಲಿಯೋನೆಲ್ ಮೆಸ್ಸಿ
Lionel Messi New Club: ಸೌದಿ ಅರೇಬಿಯಾದ ಖ್ಯಾತ ಫುಟ್ಬಾಲ್ ಕ್ಲಬ್ ಅಲ್ ಹಿಲಾಲ್ ಲಿಯೋನೆಲ್ ಮೆಸ್ಸಿಗೆ ಬಿಗ್ ಆಫರ್ ನೀಡಿದೆ ಎನ್ನಲಾಗಿತ್ತು.
Updated on: Jun 08, 2023 | 5:24 PM

ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಇಂಟರ್ ಮಿಯಾಮಿ ಕ್ಲಬ್ ಪರ ಕಣಕ್ಕಿಳಿಯುವುದನ್ನು ಖಚಿತಪಡಿಸಿದ್ದಾರೆ. ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ ಕ್ಲಬ್ ಜೊತೆಗಿನ ಒಪ್ಪಂದದ ಮುಕ್ತಾಯದ ಬೆನ್ನಲ್ಲೇ ಮೆಸ್ಸಿ ಮತ್ತೆ ಬಾರ್ಸಿಲೋನಾ ತಂಡಕ್ಕೆ ಹಿಂತಿರುಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಇದರ ಜೊತೆಗೆ ಸೌದಿ ಅರೇಬಿಯಾದ ಖ್ಯಾತ ಫುಟ್ಬಾಲ್ ಕ್ಲಬ್ ಅಲ್ ಹಿಲಾಲ್ ಲಿಯೋನೆಲ್ ಮೆಸ್ಸಿಗೆ ಬಿಗ್ ಆಫರ್ ನೀಡಿದೆ ಎನ್ನಲಾಗಿತ್ತು. ಆದರೀಗ ಅಮೆರಿಕದ ಮೇಜರ್ ಲೀಗ್ ಸಾಕರ್ ತಂಡ "ಇಂಟರ್ ಮಿಯಾಮಿ" ಪರ ಆಡಲು ಸಹಿ ಹಾಕಲಿದ್ದೇನೆ ಎಂದು ಸ್ಪ್ಯಾನಿಷ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮೆಸ್ಸಿ ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಯೂರೋಪ್ನ ಇತರೆ ಕ್ಲಬ್ಗಳಿಂದ ಆಫರ್ ಬಂದಿರುವುದನ್ನು ಖಚಿತಪಡಿಸಿದ ಮೆಸ್ಸಿ, ತಾನು ಯುರೋಪ್ನಲ್ಲಿ ಆಡಿದ್ರೆ ಅದು ಬಾರ್ಸಿಲೋನಾ ತಂಡದ ಪರ ಮಾತ್ರ ಆಡುತ್ತೇನೆ ಎಂದು ನಿರ್ಧರಿಸಿದ್ದೆ. ಹೀಗಾಗಿ ಬೇರೆ ಕ್ಲಬ್ಗಳ ಆಫರ್ ಬಗ್ಗೆ ನಾನು ಆಸಕ್ತಿ ತೋರಲಿಲ್ಲ ಎಂದರು.

2004 ರಿಂದ 2021 ರವರೆಗೆ ಸ್ಪೇನ್ನ ಬಾರ್ಸಿಲೋನಾ ಕ್ಲಬ್ ಪರ ಆಡಿದ್ದ ಲಿಯೋನೆಲ್ ಮೆಸ್ಸಿ 778 ಪಂದ್ಯಗಳಲ್ಲಿ 672 ಗೋಲ್ಗಳನ್ನು ಬಾರಿಸಿದ್ದರು. ಇದಾದ ಬಳಿಕ ಫ್ರಾನ್ಸ್ನ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಪರ ಕಣಕ್ಕಿಳಿದಿದ್ದ ಫುಟ್ಬಾಲ್ ಅಂಗಳದ ಮಾಂತ್ರಿಕ 75 ಪಂದ್ಯಗಳಲ್ಲಿ ಕೇವಲ 32 ಗೋಲುಗಳಿಸಲಷ್ಟೇ ಶಕ್ತರಾಗಿದ್ದರು.

2023 ರ ಆರಂಭದಿಂದಲೇ PSG ಯೊಂದಿಗಿನ ಮೆಸ್ಸಿಯ ಸಂಬಂಧವು ಹದಗೆಟ್ಟಿತ್ತು. ಇತ್ತ ಒಪ್ಪಂದ ಕೂಡ ಮುಗಿಯುತ್ತಿದ್ದಂತೆ ಕ್ಲಬ್ ತೊರೆಯಲು ಲಿಯೋನೆಲ್ ಮೆಸ್ಸಿ ನಿರ್ಧರಿಸಿದ್ದಾರೆ. ಅದರಂತೆ ಇದೀಗ ಹೊಸ ಕ್ಲಬ್ ಪರ ಒಪ್ಪಂದ ಮಾಡಿಕೊಂಡಿದ್ದು, ಇದಾಗ್ಯೂ ಇಂಟರ್ ಮಿಯಾಮಿ ಒಪ್ಪಂದ ಮೊತ್ತವನ್ನು ಬಹಿರಂಗಪಡಿಸಿಲ್ಲ.

ಅಂದಹಾಗೆ ಲಿಯೋನೆಲ್ ಮೆಸ್ಸಿ ಈ ಹಿಂದೆ ಪ್ಯಾರಿಸ್ ಸೇಂಟ್ ಜರ್ಮೈನ್ (PSG) ಪರ ಆಡಲು ಸುಮಾರು 348 ಕೋಟಿ ರೂ. ಪಡೆದಿದ್ದರು ಎಂದು ವರದಿಯಾಗಿತ್ತು. ಹೀಗಾಗಿ ಈ ಬಾರಿ ಕೂಡ ಅಮೆರಿಕನ್ ಕ್ಲಬ್ ಪರ ಆಡಲು ಬೃಹತ್ ಮೊತ್ತದ ಒಪ್ಪಂದ ನಡೆದಿರುವ ಸಾಧ್ಯತೆ ಹೆಚ್ಚಿದೆ.



















