
ಭಾನುವಾರ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣದ ಬಳಿಕ ಮದ್ದೂರು ಬೂದಿ ಮುಚ್ಚಿದ ಕೆಂಡದಂತೆ ಇದೆ. ಮಂಗಳವಾರ ಮದ್ದೂರು ಪಟ್ಟ ಬಂದ್ ನಡೆಸಲಾಗಿದೆ. ಈ ಮಧ್ಯೆ ಇವತ್ತು ಬಿಜೆಪಿ ನಿಯೋಗ ಮದ್ದೂರಿಗೆ ಭೇಟಿ ನೀಡಿದ್ದು, ಮದ್ದೂರಿನಲ್ಲಿ 28 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆಯುತ್ತಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ನಿಯೋಗ ಮದ್ದೂರಿನಲ್ಲಿ ಅಬ್ಬರಿಸಿದೆ.

ಮದ್ದೂರಿನ ಐಬಿ ಸರ್ಕಲ್, ಪೇಟೆಬೀದಿ, ಕೊಲ್ಲಿ ಸರ್ಕಲ್ನಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಕೇಸರಿ ಧ್ವಜವನ್ನು ಹಿಡಿದು ಹಿಂದೂ ಕಾರ್ಯಕರ್ತರು ಭರ್ಜರಿ ಡ್ಯಾನ್ಸ್ ಮಾಡಿದರು. ಜೈಶ್ರೀರಾಮ್, ಜೈಹನುಮಾನ್ ಘೋಷಣೆ ಕೂಗಿದರು.

ಮಂಡ್ಯದ ಮದ್ದೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ನಿಯೋಗವೂ ಭೇಟಿ ಕೊಟ್ಟಿದೆ. ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿ ಆಗಿದೆ. ವಿಜಯೇಂದ್ರ, ಅಶೋಕ್, ಸಿ.ಟಿ.ರವಿ, ಸಂಸದ ಯದುವೀರ್ ಒಡೆಯರ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರೇ ಮೆರವಣಿಗೆಯಲ್ಲಿ ಭಾಗಿಯಾದರು. ಗಣೇಶನಿಗೆ ಪೂಜೆ ಸಲ್ಲಿಸಿದರು. ಮೆರವಣಿಗೆ ವೇಳೆ ಬಿಜೆಪಿ ನಾಯಕರು ಕುಣಿದು ಕುಪ್ಪಳಿಸಿದರು. ಕೇಸರಿ ಶಾಲು ಹಿಡಿದು ಮದ್ದೂರಿನಲ್ಲಿ ಅಬ್ಬರಿಸಿರುವುದು ಎಲ್ಲರ ಗಮನ ಸೆಳೆಯಿತು.

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಪೊಲೀಸ್ ಕಟ್ಟೆಚ್ಚರವಹಿಸಲಾಗಿತ್ತು. ಮದ್ದೂರು ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಭದ್ರತೆಗಾಗಿ ಬರೋಬ್ಬರಿ 1500ಕ್ಕೂ ಹೆಚ್ಚು ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು.

ಮದ್ದೂರು ಗಲಾಟೆ ವಿಚಾರದಲ್ಲಿ ಸರ್ಕಾರದ ನಡೆಯನ್ನೇ ಖಂಡಿಸಿದ ಶಾಸಕ ಅಶ್ವತ್ಥ್ ನಾರಾಯಣ್, ಈ ಸರ್ಕಾರ ಬದುಕಿದ್ಯಾ? ಸತ್ತಿದ್ಯಾ ಅಂತಾ ಆಕ್ರೋಶ ಹೊರಹಾಕಿದರು. ಬಿಜೆಪಿ, ಜೆಡಿಎಸ್ನಿಂದಲೇ ಕುಮ್ಮಕ್ಕು ಎಂದು ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು. ಇದಕ್ಕೆ ತಿರುಗೇಟು ಕೊಟ್ಟ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ನಿಂದ್ಲೇ ಓಲೈಕೆ ರಾಜಕೀಯ ಎಂದರು.

ಬಿಜೆಪಿಗೆ ಬೆಂಕಿ ಇಡೋದೇ ಕೆಲಸ ಎಂದು ಡಿಸಿಎಂ ಡಿಕೆಶಿ ಕೆಂಡಕಾರಿದರು. ಇದಕ್ಕೆ ಗರಂ ಆದ ಆರ್.ಅಶೋಕ್, ಇಷ್ಟು ದಿನ ನೀವ್ ಕೆಲಸ ಇಲ್ಲದೇ ರೆಸ್ಟ್ನಲ್ಲಿ ಇದ್ದಿರಿ, ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

ಒಟ್ಟಿನಲ್ಲಿ ಮಂಡ್ಯದ ಮದ್ದೂರು ಬುಧವಾರ ಸಂಪೂರ್ಣ ಕೇಸರಿಮಯ ಆಗಿತ್ತು. ಹಿಂದೂ ಸಂಘಟನೆಗಳು ಅಬ್ಬರಿಸಿದವು. 28 ಸಾಮೂಹಿಕ ಗಣೇಶ ವಿಸರ್ಜನೆ ಮೂಲಕ ಶಕ್ತಿ ಪ್ರದರ್ಶನ ಮಾಡುವ ಪ್ರಯತ್ನ ಮಾಡಿದರು.