ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ 2023ರಲ್ಲಿ ನಟಿ ಮಾಧುರಿ ದೀಕ್ಷಿತ್ ವಿಶೇಷ ಗೌರವಕ್ಕೆ ಆಯ್ಕೆ ಆಗಿದ್ದಾರೆ.
ಭಾರತೀಯ ಸಿನಿಮಾಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಮಾಧುರಿ ದೀಕ್ಷಿತ್ ಅವರನ್ನು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಈ ವಿಷಯವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ಹಂಚಿಕೊಂಡಿದ್ದಾರೆ, ಮಾಧುರಿ ದೀಕ್ಷಿತ್ ಅವರಿಗೆ ಶುಭಾಶಯ ಸಹ ಕೋರಿದ್ದಾರೆ.
ಭಾರತದ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರರಂಗದಲ್ಲಿ ಶ್ರೇಷ್ಠತೆಯನ್ನು ನೀಡಿದ ಪ್ರತಿಭಾವಂತ, ವರ್ಚಸ್ವಿ ನಟಿ ಮಾಧುರಿ ಅವರಿಗೆ 'ಭಾರತೀಯ ಸಿನಿಮಾಗೆ ಕೊಡುಗೆಗಾಗಿ ವಿಶೇಷ ಮನ್ನಣೆ' ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತೋಷವಿದೆ ಎಂದಿದ್ದಾರೆ.
54ನೇ ಗೋವಾ ಸಿನಿಮೋತ್ಸವವು ಇಂದು ಪ್ರಾರಂಭವಾಗಿದ್ದು ಮುಂದಿನ 9 ದಿನಗಳ ಕಾಲ ಈ ಸಿನಿಮಾ ಉತ್ಸವವು ನಡೆಯಲಿದೆ. ಹಲವು ರಾಷ್ಟ್ರಗಳ ಪ್ರಸಿದ್ಧ ಸಿನಿಮಾ ಕರ್ಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮಾಧುರಿ ದೀಕ್ಷಿತ್ ಸೇರಿದಂತೆ ಇನ್ನೂ ಕೆಲವರಿಗೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಆದರೆ ಮಾಧುರಿ ಅವರಿಗೆ ನೀಡಲಾಗುತ್ತಿರುವ ಪ್ರಶಸ್ತಿ ವಿಶೇಷವಾದುದು.
ಮಾಧುರಿ ದೀಕ್ಷಿತ್ ಅವರು ಬಿಜೆಪಿ ಪಕ್ಷ ಸೇರಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು, ಅದರ ಬೆನ್ನಲ್ಲೆ ಇದೀಗ ಅವರಿಗೆ ಪ್ರಶಸ್ತಿ ಘೋಷಣೆ ಆಗಿದೆ.