ಪುಣ್ಯ ಸ್ನಾನದ ಹೆಸರಲ್ಲಿ ಜೀವ ನದಿಗಳನ್ನು ಮಲಿನ ಮಾಡಲಾಗುತ್ತಿದೆ. ಹಾಗಾಗಿ ಇನ್ಮುಂದೆ ಪುಣ್ಯ ಕ್ಷೇತ್ರಗಳ ನದಿಗಳಲ್ಲಿ ಸ್ನಾನ ಮಾಡುವಾಗ ಸೋಪು, ಶ್ಯಾಂಪೂ ಬಳಕೆ ನಿಷೇಧಿಸಲಾಗಿದೆ. ರಾಜ್ಯ ಸರಕಾರದ ಈ ಆದೇಶ ಬೆನ್ನಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಕ್ರಾಂತಿಯೇ ನಡೆದಿದೆ. ಏಕಕಾಲದಲ್ಲಿ ಸುಮಾರು ಒಂದು ಸಾವಿರ ಜನರಿಂದ ನೇತ್ರಾವತಿ ನದಿಯ ಬೃಹತ್ ಸ್ವಚ್ಚತಾ ಕಾರ್ಯ ಮಾಡಲಾಗಿದೆ.
ಬೆಳ್ತಂಗಡಿಯ ‘ಬದುಕು ಕಟ್ಟೋಣ ಬನ್ನಿ ತಂಡ’ದಿಂದ ಸ್ವಚ್ಛ ನೇತ್ರಾವತಿ ಅಭಿಯಾನ ಆಯೋಜಿಸಿದ್ದು, ಜೀವ ನದಿ ನೇತ್ರಾವತಿಯ ಶುದ್ದೀಕರಣ ಮಾಡಲಾಗಿದೆ.
ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಾನದ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ವಯಂಸೇವಕರಿಂದ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ನೇತ್ರಾವತಿಯ ಒಡಲನ್ನ ಕಲುಷಿತಗೊಳಿಸುವ ವಸ್ತುಗಳನ್ನ ಹೊರತೆಗೆಯಲಾಗಿದೆ.
ಕೆಲ ಭಕ್ತರು ಪುಣ್ಯ ಸ್ನಾನದ ಹೆಸರಲ್ಲಿ ನದಿಯನ್ನು ಮಲಿನಗೊಳಿಸುತ್ತಿದ್ದಾರೆ. ಧರಿಸಿರುವ ಬಟ್ಟೆಗಳನ್ನು ನದಿಯಲ್ಲಿ ವಿಸರ್ಜಿನ ಮಾಡುತ್ತಿದ್ದಾರೆ. ಹೀಗಾಗಿ ನೇತ್ರಾವತಿಯ ಒಡಲಿನಲ್ಲಿ ಲೋಡ್ ಗಟ್ಟಲೆ ಬಟ್ಟೆ ರಾಶಿ ಸಿಕ್ಕಿದೆ. ಜೊತೆಗೆ ಸೋಪ್, ಶಾಂಪೂ ಪ್ಯಾಕೆಟ್ಗಳನ್ನು ಸಿಕ್ಕಿದ್ದು, ಎಲ್ಲವನ್ನು ಹೊರತೆಗೆದು ಸ್ವಚ್ಛತೆ ಮಾಡಲಾಗಿದೆ.
‘ಬದುಕು ಕಟ್ಟೋಣ ಬನ್ನಿ ತಂಡ’ದೊಂದಿಗೆ ಬೆಳ್ತಂಗಡಿ ಪೊಲೀಸ್ ಇಲಾಖೆ, ಎಸ್ಡಿಎಂ ವಿದ್ಯಾರ್ಥಿಗಳು ಸ್ವಚ್ಚತೆಯಲ್ಲಿ ಭಾಗಿಯಾಗಿದ್ದರು. ಮುಂದೆ ಈ ರೀತಿ ನದಿ ಮಲಿನಗೊಳಿಸದಂತೆ ಭಕ್ತರಲ್ಲಿ ಜಾಗೃತಿ ಮೂಡಿಸಿದ್ದಾರೆ.