
ಮಳೆಗಾಲ ಬಂತು ಅಂದರೆ ಸಾಕು ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ಸಮಸ್ಯೆಗಳ ಸರಮಾಲೆಯೇ ಸೃಷ್ಟಿಯಾಗುತ್ತೆ. ಜೋರು ಮಳೆಗೆ ನಗರದ ಹಲವು ಭಾಗಗಳು ಮುಳುಗಡೆಯಾದರೆ, ಇತ್ತ ರಸ್ತೆ ತುಂಬಾ ಗುಂಡಿಗಳೇ ಗುಂಡಿಗಳು. ಹೀಗಾಗಿ ಗುಂಡಿಗಳ ಜೊತೆ ಅವ್ಯವಸ್ಥೆಯ ಆಗರವಾಗಿರುವ ಮಂಗಳೂರಿನಲ್ಲಿ ಜನ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹೌದು.. ಕಡಲ ತಡಿ ಮಂಗಳೂರಿನ ರಸ್ತೆಗಳು ಗುಂಡಿಗಳ ಆಗರವಾಗಿ ಬಿಟ್ಟಿದೆ. ಸ್ಮಾರ್ಟ್ ಸಿಟಿಯ ಒಳ ರಸ್ತೆ ಮಾತ್ರವಲ್ಲ, ಪ್ರಮುಖ ರಸ್ತೆಗಳು ಹೊಂಡ, ಗುಂಡಿಗಳಿಂದ ತುಂಬಿದೆ. ಪ್ರಮುಖ ರಸ್ತೆಗಳೇ ಕಚ್ಚಾ ರಸ್ತೆಗಿಂತಲೂ ಕಡೆಯಾಗಿ ಬಿಟ್ಟಿದೆ.

ಪಂಪುವೆಲ್ನಿಂದ ಕಂಕನಾಡಿ ಮೂಲಕ ಮಂಗಳೂರು ನಗರಕ್ಕೆ ಪ್ರವೇಶಿಸುವ ಈ ರಸ್ತೆಯ ಗುಂಡಿಗಳು ಕಾರುಬಾರು ಜೋರಾಗಿದೆ. ಇಂತಹ ದೊಡ್ಡ ದೊಡ್ಡ ಗುಂಡಿಗಳಿಂದಾಗಿ ದ್ವಿಚಕ್ರ ವಾಹನ ಸವಾರ ಪಾಡು ಹೇಳತೀರದ್ದಾಗಿದೆ. ಸಾಕಷ್ಟು ವಾಹನ ಸವಾರರು ಈ ಗುಂಡಿಗಳಲ್ಲಿ ಬಿದ್ದಿದ್ದಾರೆ ಕೂಡ.

ಮಂಗಳೂರು ಕದ್ರಿ ಕಂಬಳದಿಂದ ಕದ್ರಿ ದೇವಸ್ಥಾನ ಸಂಪರ್ಕಿಸುವ ರಸ್ತೆ, ಕೋಡಿಯಾಲ್ ಬೈಲ್ ಅಡ್ಡ ರಸ್ತೆ, ಜೆಪ್ಪು ಮಹಕಾಳಿ ಪಡ್ಪು ಶಾಲೆಯ ಬಳಿಯ ರಸ್ತೆ, ಹೀಗೆ ಹತ್ತಾರು ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ವಾಹನ ಸವಾರರು ಮಹಾನಗರ ಪಾಲಿಕೆಗೆ ಹಾಗೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿಯೇ ಮುಂದೆ ಸಾಗುತ್ತಿದ್ದಾರೆ.

ಮೇ ಕೊನೆಗೆ ಮಳೆ ಬರುವ ಸಮಯದಲ್ಲೇ ಕಾಟಾಚಾರಕ್ಕೆ ರಸ್ತೆಗೆ ತೇಪೆ ಹಾಕಲಾಗುತ್ತು. ಆದರೆ ಜೂನ್‌ನಲ್ಲಿ ಮಳೆ ಬಂದಾಗ ರಸ್ತೆಗೆ ಹಾಕಿದ ತೇಪೆ ಕಿತ್ತು ಹೋಗಿ ಪಾಲಿಕೆ ಕರ್ಮಕಾಂಡ ಜನರಿಗೆ ಗೊತ್ತಾಗಿತ್ತು. ಇನ್ನು ರಸ್ತೆ ಅವ್ಯವಸ್ಥೆ ಖಂಡಿಸಿ ಮಂಗಳವಾರದಂದು ಡಿವೈಎಫ್ಐ ಸಂಘಟನೆ ಪ್ರತಿಭಟನೆಗೆ ನಿರ್ಧರಿಸಿದೆ.

ಒಟ್ಟಿನಲ್ಲಿ ರಸ್ತೆಯೇ ಸರಿ ಇಲ್ಲದ ಹೊರತು ಮಂಗಳೂರು ಸ್ಮಾರ್ಟ್ ಸಿಟಿ ಆದರೇನು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಮಳೆಗಾಲ ಮುಗಿಯುವವರೆಗೆ ತಾತ್ಕಾಲಿಕವಾದರೂ ಹೊಂಡ ಗುಂಡಿಗಳ ಪ್ಯಾಚ್ ವರ್ಕ್ ಮಾಡಬೇಕಿದೆ.