
ಯಾರಾದ್ರೂ ಬಂದು ನಿಮ್ಮ ಬಳಿ ಬಂದು ಹಣ್ಣುಗಳ ರಾಜ ಯಾವುದೆಂದು ಕೇಳಿದ್ರೆ ನೀವು ಹೇಳುವ ಉತ್ತರ ಮಾವಿನಹಣ್ಣು ಆಗಿರುತ್ತದೆ. ಅದೇ ಹಣ್ಣುಗಳ ರಾಣಿಯ ಬಗ್ಗೆ ನಿಮ್ಮತ್ರ ಕೇಳಿದ್ರೆ ಒಂದು ಕ್ಷಣ ನೀವು ಯೋಚನೆ ಮಾಡ್ತೀರಾ. ಈ ಹಣ್ಣುಗಳ ರಾಣಿಯ ಬಗ್ಗೆ ಎಷ್ಟೋ ಜನರಿಗೆ ತಿಳಿದೇ ಇಲ್ಲ.

ಹಣ್ಣುಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಹಣ್ಣು ಮ್ಯಾಂಗೋಸ್ಟೀನ್. ಇದೊಂದು ಉಷ್ಣವಲಯದಲ್ಲಿ ಬೆಳೆಯಲಾಗುವ ಹಣ್ಣಾಗಿದ್ದು, ಇಲ್ಲಿಯವರೆಗೆ ಈ ಹಣ್ಣಿನ ಹೆಸರನ್ನು ಕೇಳಿರಲೇ ಇಲ್ಲವಲ್ಲ ಎಂದು ನಿಮಗೆ ಅನಿಸಬಹುದು.

ಈ ಮ್ಯಾಂಗೋಸ್ಟೀನ್ ಹಣ್ಣು ನೋಡುವುದಕ್ಕೆ ಗಾಢ ನೇರಳೆ ಬಣ್ಣದಲ್ಲಿದ್ದು, ಒಳಗೆ ಬಿಳಿ ಬಣ್ಣದ ತಿರುಳನ್ನು ಹೊಂದಿದ್ದು, ನೋಡುವುದಕ್ಕೆ ಮಾತ್ರವಲ್ಲ ರುಚಿ ಕೂಡ ಅಷ್ಟೇ ಅದ್ಭುತ. ಈ ಹಣ್ಣಿನ ಸೇವನೆಯಿಂದ ಆರೋಗ್ಯ ಲಾಭಗಳು ಸಾಕಷ್ಟು ಇವೆ.

ಥೈಲ್ಯಾಂಡ್, ಮಲೇಷಿಯಾ, ಇಂಡೋನೇಷ್ಯಾ ಹಾಗೂ ಫಿಲಿಪೈನ್ಸ್ ನಲ್ಲಿ ಹೇರಳವಾಗಿ ಬೆಳೆಯಲಾಗುವ ಈ ಹಣ್ಣು ಋತುಮಾನದ ಹಣ್ಣಾಗಿದೆ. ಕೇರಳ, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಈ ಹಣ್ಣು ಕಾಣಸಿಗುತ್ತದೆ.

ಭಾರತದಲ್ಲಿ ಈ ಹಣ್ಣು ಮೇ ಆಗಸ್ಟ್ ತಿಂಗಳಿನಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಇದು ರುಚಿಯಲ್ಲಿ ಮಾವಿನ ಹಣ್ಣಿನಂತೆ ಇದ್ದು, ಹೀಗಾಗಿ ಇದಕ್ಕೆ ಮ್ಯಾಂಗೋಸ್ಟೀನ್ ಎಂಬ ಹೆಸರು ಬಂದಿತಂತೆ.

ಅಷ್ಟೇ ಅಲ್ಲದೇ, 1930ರ ದಶಕದಲ್ಲಿ ಅಮೆರಿಕಾದ ಸಸ್ಯಶಾಸ್ತ್ರಜ್ಞ ಡೇವಿಡ್ ಫೇರ್‌ಚೈಲ್ಡ್ ಮ್ಯಾಂಗೋಸ್ಟೀನ್‌ಗೆ "ಹಣ್ಣುಗಳ ರಾಣಿ" ಎಂದು ಕರೆದಿದ್ದು, ಅಂದಿನಿಂದ ರಸಭರಿತವಾದ ಈ ಹಣ್ಣು ಈ ಹೆಸರಿನಿಂದಲೇ ಜನಪ್ರಿಯವಾಯಿತು.