- Kannada News Photo gallery Cricket photos IND vs ENG: Who Will Replace Virat Kohli, Rohit Sharma In India Test XI?
ರೋಹಿತ್ ಶರ್ಮಾ ಬದಲಿಗೆ ಯಾರು? ವಿರಾಟ್ ಕೊಹ್ಲಿ ಸ್ಥಾನ ಸಿಗೋದು ಯಾರಿಗೆ?
India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜೂನ್ 20 ರಿಂದ ಶುರುವಾಗಲಿದೆ. ಆಂಗ್ಲರ ನಾಡಿನಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಪಂದ್ಯಗಳನ್ನಾಡಲಿದೆ. ಈ ಸರಣಿಯಲ್ಲಿ ಭಾರತ ತಂಡವನ್ನು ಯುವ ದಾಂಡಿಗ ಶುಭ್ಮನ್ ಗಿಲ್ ಮುನ್ನಡೆಸಲಿದ್ದಾರೆ.
Updated on: Jun 09, 2025 | 8:55 AM

ಭಾರತ ಮತ್ತು ಇಂಗ್ಲೆಂಡ್ (IND vs ENG) ನಡುವಣ ಟೆಸ್ಟ್ ಸರಣಿಗೆ ದಿನಗಣನೆ ಶುರುವಾಗಿದೆ. ಜೂನ್ 20 ರಿಂದ ಆರಂಭವಾಗಲಿರುವ 5 ಪಂದ್ಯಗಳ ಈ ಸರಣಿಗಾಗಿ ಈಗಾಗಲೇ 16 ಸದಸ್ಯರ ಬಲಿಷ್ಠ ಪಡೆಯನ್ನು ಘೋಷಿಸಲಾಗಿದೆ. ಈ 16 ಆಟಗಾರರಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಸ್ಥಾನಗಳನ್ನು ತುಂಬುವವರು ಯಾರು ಎಂಬುದೇ ಈಗ ದೊಡ್ಡ ಪ್ರಶ್ನೆ.

ಏಕೆಂದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ದಿಗ್ಗಜರಿಬ್ಬರ ನಿವೃತ್ತಿಯ ಬಳಿಕ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಟೆಸ್ಟ್ ಸರಣಿ ಆಡಲು ಸಜ್ಜಾಗಿದೆ. ಅದರಂತೆ ಜೂನ್ 20 ರಿಂದ ಶುರುವಾಗಲಿರುವ ಸರಣಿಯ ಮೂಲಕ ಹೊಸ ಅಧ್ಯಾಯವೊಂದು ಪ್ರಾರಂಭವಾಗಲಿದೆ.

ಇಲ್ಲಿ ರೋಹಿತ್ ಶರ್ಮಾ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿಯುವವರು ಯಾರು ಎಂಬ ಪ್ರಶ್ನೆಗೆ ಸದ್ಯ ಕೇಳಿ ಬರುತ್ತಿರುವ ಉತ್ತರ, ಕನ್ನಡಿಗ ಕೆಎಲ್ ರಾಹುಲ್. ಈ ಹಿಂದೆ ಟೀಮ್ ಇಂಡಿಯಾ ಪರ ಟೆಸ್ಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಅನುಭವ ಹೊಂದಿರುವ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣದಿಂದಾಗಿ ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ ಎ ಪರ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ವಿರಾಟ್ ಕೊಹ್ಲಿಯ ಸ್ಥಾನದಲ್ಲಿ ಶುಭ್ಮನ್ ಗಿಲ್ ಆಡುವುದು ಬಹುತೇಕ ಖಚಿತ. ಅಂದರೆ ಕೆಎಲ್ ರಾಹುಲ್ ಆರಂಭಿಕನಾಗಿ ಆಡಿದ್ರೆ, ಗಿಲ್ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ಈ ಹಿಂದೆ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಹೀಗಾಗಿ ಕೊಹ್ಲಿಯ ಸ್ಥಾನದಲ್ಲಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಇದಕ್ಕೂ ಮುನ್ನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಶುಭ್ಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದರು. ಇದೀಗ ಕೊಹ್ಲಿಯ ಅನುಪಸ್ಥಿತಿಯಲ್ಲಿ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆಯಿದೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕರುಣ್ ನಾಯರ್ ಅಥವಾ ಸಾಯಿ ಸುದರ್ಶನ್ಗೆ ಅವಕಾಶ ಸಿಗಬಹುದು.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಧ್ರುವ್ ಜುರೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್.









