
ಇಂದು ಎಲ್ಲವೂ ಸರಿ ಇದ್ದವರಿಗೆ ವಧು ಅಥವಾ ವರ ಸಿಗುವುದು ಕಷ್ಟವಾಗಿದೆ. ಅದರಲ್ಲೂ ರೈತನೆಂದರೆ ಮೂಗು ಮುರಿಯುವವರೇ ಹೆಚ್ಚು. ಇನ್ನು ಜಾತಿ, ಜಾತಕ ಎಲ್ಲವನ್ನೂ ನೋಡಿ ಬಳಿಕ ಮದುವೆ. ಆದರೆ, ಇಲ್ಲೊಂದು ಮದುವೆ ನಡೆದಿದ್ದು, ಅನಾಥೆಗೆ ಕಂಕಣ ಭಾಗ್ಯ ದೊರೆತಿದೆ.

ದಾವಣಗೆರೆಯ ರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಜಿಲ್ಲಾಡಳಿತದ ವತಿಯಿಂದ ವಿವಾಹವೊಂದು ನಡೆದಿದ್ದು, ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು.

ಯುವತಿ ದಿವ್ಯಾ ಹಾಗೂ ಚಿತ್ರದುರ್ಗದ ನಾಗರಾಜ್ ಎಂಬುವವರು ಕುವೆಂಪು ಅವರ ಮಂತ್ರ ಮಾಂಗಲ್ಯದ ಮೂಲಕ ನವ ಜೀವನಕ್ಕೆ ಕಾಲಿಟ್ಟರು.

ನವ ದಂಪತಿಗಳಿಗೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್, ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ್ ಸೇರಿದಂತೆ ಹಲವರು ಶುಭ ಕೋರಿದರು. ಮುಂದಿನ ಜೀವನ ಚೆನ್ನಾಗಿರಲೆಂದು ಹಾರೈಸಿದರು.

ಮಧ್ಯಾಹ್ನ ಉಪನೊಂದಣಿ ಕಚೇರಿಯಲ್ಲಿ ಮದುವೆ ನೋಂದಣಿ ನಡೆದಿದ್ದು, ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪಾಯಸ, ಜಿಲೇಬಿ, ಪೂರಿ, ಪನ್ನಿರ್ ಮಸಾಲ, ಅನ್ನ ಸಂಬಾರ್ ಸೇರಿದಂತೆ ಇನ್ನಿತರ ಪದ್ದಾರ್ಥವನ್ನು ಬಂದಿದ್ದ ಜನರು ಸವಿದರು.‘

ಇದು ಮಹಿಳಾ ನಿಲಯದಲ್ಲಿ ನಡೆಯುತ್ತಿರುವ 43ನೇ ವಿವಾಹವಾಗಿದ್ದು, ಮದುಮಗಳ ಹೆಸರಿನಲ್ಲಿ 15 ಸಾವಿರ ಮೊತ್ತದ ಬಾಂಡ್, ಇದು ಮೂರು ವರ್ಷಗಳ ನಂತರ ಇಲಾಖೆ ಬಡ್ಡಿ ಸಮೇತ ವಾಪಸ್ ನೀಡಲಿದೆ. ಈ ಹಿನ್ನಲೆ ಮಹಿಳಾ ಮತ್ತು ಮಕ್ಕಳ ನಿಲಯ ಮೆಚ್ಚುಗೆಗೆ ಪಾತ್ರವಾಗುತ್ತಿದೆ.