ಪಾಕಿಸ್ತಾನ ತಂಡದ ನಾಯಕತ್ವ ಕಳೆದುಕೊಂಡ ಮೇಲೆ ಫಾರ್ಮ್ ಕಳೆದುಕೊಂಡು ಮೂಲೆಗುಂಪಾಗಿದ್ದ, ಬಾಬರ್ ಆಜಂ ಇತ್ತೀಚೆಗೆ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಬಾಬರ್ ಈ ದಾಖಲೆ ಬರೆದಿದ್ದಾರೆ.
ಪಾಕಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕತ್ವವಹಿಸಿಕೊಂಡಿರುವ ಬಾಬರ್, ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿಕೊಂಡಿದ್ದಾರೆ. ಬಾಬರ್ಗೂ ಮುನ್ನ ಈ ದಾಖಲೆ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ ಹೆಸರಿನಲ್ಲಿತ್ತು.
ಫೆಬ್ರವರಿ 21 ರಂದು ಕರಾಚಿ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 51 ಎಸೆತಗಳಲ್ಲಿ 72 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಬಾಬರ್ ತಮ್ಮ ಈ ದಾಖಲೆಯ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಅವರು ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 10 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡರು .
ಬಾಬರ್ ಇದುವರೆಗೆ 281 ಟಿ20 ಪಂದ್ಯಗಳನ್ನಾಡಿದ್ದು, 271 ಇನ್ನಿಂಗ್ಸ್‌ಗಳಲ್ಲಿ 10000 ರನ್ ಪೂರ್ಣಗೊಳಿಸಿದ್ದಾರೆ. ಆದರೆ ಕ್ರಿಸ್ ಗೇಲ್ ಈ ದಾಖಲೆಯನ್ನು ಮುಟ್ಟಲು 285 ಇನ್ನಿಂಗ್ಸ್ ಆಡಬೇಕಿತ್ತು.
ಬಾಬರ್ ನಂ.1 ಸ್ಥಾನಕ್ಕೇರುವ ಮೂಲಕ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಈ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. 2021ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಟಿ20ಯಲ್ಲಿ ವಿರಾಟ್ ಕೊಹ್ಲಿ 10 ಸಾವಿರ ರನ್ ಗಳಿಸಿದ್ದರು. ಇದಕ್ಕಾಗಿ ವಿರಾಟ್ ಕೊಹ್ಲಿ 299 ಇನ್ನಿಂಗ್ಸ್ ಆಡಬೇಕಿತ್ತು.
ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಟಿ20 ಕ್ರಿಕೆಟ್‌ನಲ್ಲಿ ಒಟ್ಟು 11994 ರನ್ ಗಳಿಸಿದ್ದು, ಈ ಸ್ವರೂಪದಲ್ಲಿ 12 ಸಾವಿರ ರನ್ ಪೂರೈಸಲು ವಿರಾಟ್ಗೆ ಕೇವಲ 6 ರನ್‌ಗಳ ಅವಶ್ಯಕತೆ ಇದೆ.
ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ವಿಶ್ವದ ಪ್ರತಿಯೊಂದು ಕ್ರಿಕೆಟ್ ಲೀಗ್‌ನಲ್ಲಿ ಆಡಿರುವ ಕ್ರಿಸ್ ಗೇಲ್ ಈ ಮಾದರಿಯಲ್ಲಿ ಒಟ್ಟು 14565 ರನ್ ಗಳಿಸಿದ್ದಾರೆ. ಇದಲ್ಲದೇ ಟಿ20ಯಲ್ಲಿ ಗರಿಷ್ಠ 22 ಶತಕ ಹಾಗೂ 88 ಅರ್ಧ ಶತಕ ಬಾರಿಸಿದ್ದಾರೆ.
Published On - 6:56 pm, Wed, 21 February 24