- Kannada News Photo gallery Cricket photos ICC Test Ranking Yashasvi Jaiswal Gains 14 Places in ICC Test rankings after double hundred in Rajkot
ICC Test Ranking: ನೂತನ ಟೆಸ್ಟ್ ರ್ಯಾಂಕಿಂಗ್ನಲ್ಲಿ 14 ಸ್ಥಾನ ಮುಂಬಡ್ತಿ ಪಡೆದ ಯಶಸ್ವಿ ಜೈಸ್ವಾಲ್..!
ICC Test Ranking: ಇಂದು ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ್ಯಾಂಕಿಂಗ್ಸ್ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ. ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ದ್ವಿಶತಕ ಸಿಡಿಸಿರುವ ಜೈಸ್ವಾಲ್, 699 ರೇಟಿಂಗ್‌ನೊಂದಿಗೆ 15 ನೇ ಸ್ಥಾನಕ್ಕೆ ಜಿಗಿದಿದ್ದಾರೆ.
Updated on:Feb 21, 2024 | 3:26 PM

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಂದು ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ್ಯಾಂಕಿಂಗ್ಸ್ನಲ್ಲಿ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ.

ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ ದ್ವಿಶತಕ ಸಿಡಿಸಿದ್ದ ಜೈಸ್ವಾಲ್ ಟೀಂ ಇಂಡಿಯಾದ ದಾಖಲೆಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶ್ರಮಕ್ಕೆ ತಕ್ಕ ಪ್ರತಿಫಲವೆಂಬಂತೆ ತನ್ನ ದ್ವಿಶತಕದಾಟಕ್ಕೆ ಐಸಿಸಿಯಿಂದ ಭರ್ಜರಿ ಮನ್ನಣೆ ಗಳಿಸಿರುವ ಜೈಸ್ವಾಲ್ ನೂತನ ಟೆಸ್ಟ್ ರ್ಯಾಂಕಿಂಗ್ನಲ್ಲಿ 14 ಸ್ಥಾನ ಮುಂಬಡ್ತಿ ಪಡೆದು, ಪ್ರಸ್ತುತ 15ನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ ಎರಡನೇ ದ್ವಿಶತಕ ಸಿಡಿಸಿರುವ ಜೈಸ್ವಾಲ್, 699 ರೇಟಿಂಗ್‌ನೊಂದಿಗೆ 15 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ 29ನೇ ಸ್ಥಾನದಲ್ಲಿದ್ದ ಜೈಸ್ವಾಲ್, ಮೂರನೇ ಟೆಸ್ಟ್ನಲ್ಲಿ ಸಿಡಿಸಿದ ಅಜೇಯ ಶತಕಕ್ಕೆ ಭರ್ಜರಿ ಬಹುಮಾನ ಪಡೆದಿದ್ದಾರೆ.

ಉಳಿದಂತೆ ಇಂದು ಬಿಡುಗಡೆಯಾಗಿರುವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಪ್ರಸ್ತುತ 893 ರೇಟಿಂಗ್ಸ್ ಹೊಂದಿರುವ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 818 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಒಂದು ಸ್ಥಾನ ಮುಂಬಡ್ತಿ ಪಡೆದಿರುವ ನ್ಯೂಜಿಲೆಂಡ್ನ ಡೇರೆಲ್ ಮಿಚೆಲ್ ಮೂರನೇ ಸ್ಥಾನದಲ್ಲಿದ್ದರೆ, ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಇದ್ದಾರೆ.

ಟೀಂ ಇಂಡಿಯಾ ವಿರುದ್ಧ ಸತತ ವೈಫಲ್ಯ ಅನುಭವಿಸಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ ಜೋ ರೂಟ್ ಎರಡು ಸ್ಥಾನ ಕುಸಿತ ಕಂಡಿದ್ದು, 766 ರೇಟಿಂಗ್‌ನೊಂದಿಗೆ ಇದೀಗ 5ನೇ ಸ್ಥಾನಕ್ಕೆ ಜಾರಿದ್ದಾರೆ.

ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ 765 ರೇಟಿಂಗ್‌ನೊಂದಿಗೆ 6ನೇ ಸ್ಥಾನದಲ್ಲಿದ್ದರೆ, ತಂದೆಯಾದ ಸಂತಸದಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಯಾವುದೇ ಟೆಸ್ಟ್ ಪಂದ್ಯವನ್ನು ಆಡದ ಹೊರತಾಗಿಯೂ 752 ರ ರೇಟಿಂಗ್‌ನೊಂದಿಗೆ ಇನ್ನೂ 7 ನೇ ಸ್ಥಾನದಲ್ಲಿ ಮುಂದುವರೆದ್ದಾರೆ.

ಶ್ರೀಲಂಕಾದ ದಮುತ್ ಕರುಣರತ್ನೆ ಒಂದು ಸ್ಥಾನ ಮುಂಬಡ್ತಿ ಪಡೆದು ಇದೀಗ 750 ರೇಟಿಂಗ್‌ನೊಂದಿಗೆ ಎಂಟನೇ ಸ್ಥಾನದಲ್ಲಿದ್ದರೆ, ಹ್ಯಾರಿ ಬ್ರೂಕ್ 9ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ 746 ರೇಟಿಂಗ್‌ನೊಂದಿಗೆ ಹತ್ತನೇ ಸ್ಥಾನದಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ರಾಜ್ಕೋಟ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 732 ರ ರೇಟಿಂಗ್‌ನೊಂದಿಗೆ 12 ನೇ ಸ್ಥಾನದಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದೊಡ್ಡ ಇನ್ನಿಂಗ್ಸ್ ಆಡಿದರೆ ಅಗ್ರ 10 ರೊಳಗೆ ಸ್ಥಾನ ಪಡೆಯುವ ಸಾಧ್ಯತೆಗಳಿವೆ.
Published On - 2:45 pm, Wed, 21 February 24




