
ದಾವಣಗೆರೆಯ ಶಾಮನೂರು ಸಮೀಪ ಇರುವ ಮಯೂರ ಗ್ಲೋಬಲ್ ಸ್ಕೂಲ್‌ನಲ್ಲಿ ಸಂಕ್ರಾಂತಿ ಹಬ್ಬದ ಅಂಗವಾಗಿ ವಿಶೇಷ ಸಂಕ್ರಾಂತಿ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆವರಣವನ್ನೇ ಹಳ್ಳಿಯ ವಾತಾವರಣದಂತೆ ರೂಪಿಸಿ, ಗ್ರಾಮೀಣ ಬದುಕಿನ ಸೊಗಡು ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಪ್ರಯತ್ನ ನಡೆಸಲಾಯಿತು.

ಶಾಲೆಯನ್ನು ತಳಿರು ತೋರಣಗಳು, ಬಣ್ಣಬಣ್ಣದ ರಂಗೋಲಿಗಳು ಹಾಗೂ ದವಸ ಧಾನ್ಯಗಳ ರಾಶಿಯಿಂದ ಅಲಂಕರಿಸಲಾಗಿತ್ತು. ಗೋ ಪೂಜೆ ನೆರವೇರಿಸಿ ಸಂಕ್ರಾಂತಿ ಆಚರಣೆ ಆರಂಭಿಸಲಾಯಿತು. ಹಳ್ಳಿಸೊಗಡಿನ ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿಗಳು ಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಬೀಸೋಕಲ್ಲು, ಒನಕೆ ಹಿಡಿದು ದವಸ ಧಾನ್ಯಗಳನ್ನು ಅಸನು ಮಾಡುವಿಕೆ, ಶಾವಿಗೆ ಮಣೆಯಲ್ಲಿ ಶಾವಿಗೆ ಹೊಸೆಯುವುದು, ಬಳೆಗಾರ ಮನೆಗೆ ಬರುವ ದೃಶ್ಯಗಳ ಮೂಲಕ ಮಕ್ಕಳಿಗೆ ಹಳ್ಳಿಯ ದಿನನಿತ್ಯದ ಬದುಕನ್ನು ನೈಜ ಅನುಭವದ ರೂಪದಲ್ಲಿ ಪರಿಚಯಿಸಲಾಯಿತು.

ಎಳ್ಳು–ಬೆಲ್ಲ ಹಂಚಿಕೆ, ಪೊಂಗಲ್, ರೋಟಿ ಸೇರಿದಂತೆ ಸಾಂಪ್ರದಾಯಿಕ ಅಡುಗೆ ತಯಾರಿ ಹಾಗೂ ದವಸ ಧಾನ್ಯಗಳಿಗೆ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಹಬ್ಬದ ಅರ್ಥ, ಮಹತ್ವ ಮತ್ತು ಕೃಷಿಯೊಂದಿಗಿನ ಮಾನವನ ಅವಿನಾಭಾವ ಸಂಬಂಧವನ್ನು ಮಕ್ಕಳಿಗೆ ವಿವರಿಸಲಾಯಿತು.

ಪಠ್ಯಪುಸ್ತಕದ ಪಾಠಗಳಿಗಿಂತ ಬದುಕಿನ ಅನುಭವದ ಮೂಲಕ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡ ಈ ಸಂಕ್ರಾಂತಿ ಸಂಭ್ರಮ, ಹಳ್ಳಿಯ ಬದುಕಿನ ಸೊಗಡನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಂಕ್ರಾಂತಿ ಸಂಭ್ರಮದಲ್ಲಿ ಮಕ್ಕಳ ಮುಖದ ನಗು, ಗ್ರಾಮೀಣ ಬದುಕಿನ ನೈಜ ದೃಶ್ಯಗಳು ಮತ್ತು ಸಂಪ್ರದಾಯಗಳ ಜೀವಂತ ಚಿತ್ರಣ ಕಾಣಸಿಗುತ್ತಿದ್ದು, ನೋಡುಗರ ಮನಸ್ಸಿನಲ್ಲಿ ಹಳ್ಳಿಯ ಸಂಸ್ಕೃತಿ ಹಾಗೂ ಹಬ್ಬದ ಆತ್ಮೀಯತೆಯನ್ನು ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ.