ವೃದ್ಧರು, ಅಮಾಯಕರು ಕೊರೆಯುವ ಈ ಚಳಿಯಲ್ಲಿ ಅಲ್ಲಲ್ಲಿ ಮಲಗಿ ಗಡಗಡ ನಡಗುತ್ತಿದ್ದಾರೆ. ಹರಿದ ಬಟ್ಟೆಯೇ ಅವರಿಗೆ ಕೊರೆಯುವ ಚಳಿಗೆ ರಕ್ಷಣೆ. ಚಳಿಯಲ್ಲಿ ಗಡಗಡ ನಡಗುವ ಜನರಿಗೆ ವಿದ್ಯಾರ್ಥಿಗಳು ಬೆಚ್ಚನೆಯ ಆಸರೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಬಾರಿ ಗದಗ ಜಿಲ್ಲೆಯಲ್ಲಿ ವಿಪರೀತ ಚಳಿಗೆ ಜನರು ಕಂಗಾಲಾಗಿದ್ದಾರೆ. ಹೊತ್ತು ಮುಳುಗುವದರೊಳಗಾಗಿ ಚಳಿ ಶುರುವಾಗಿ ಬಿಡುತ್ತೆ. ಬೆಳಿಗ್ಗೆ 10 ಗಂಟೆಯಾದರೂ ಸಹ ಚಳಿಗೆ ಹೆದರಿ ಜನ ಹೊರಬರದಂತ ಪರಿಸ್ಥಿತಿ ಇದೆ. ಆದರೆ ಅದೆಷ್ಟೋ ನಿರ್ಗತಿಕರು, ಬಡವರು, ಭಿಕ್ಷುಕರು ಇಂತಹ ಕೊರೆಯುವ ಚಳಿಯಲ್ಲಿ ಒದ್ದಾಡುತ್ತಿದ್ದಾರೆ. ಹೀಗಾಗಿ ಇಂಥವರ ಕಷ್ಟಕ್ಕೆ ವಿದ್ಯಾರ್ಥಿಗಳ ಹೃದಯ ಮಿಡಿದಿದೆ. ವಿದ್ಯಾರ್ಥಿಗಳ ತಂಡವೊಂದು ಬೆಚ್ಚನೆಯ ಬ್ಲಾಂಕೆಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ಎಎಸ್‌ಎಸ್ ವಾಣಿಜ್ಯ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ಈ ಸಾಮಾಜಿಮುಖಿ ಕೆಲಸ ಮಾಡುತ್ತಿದ್ದಾರೆ. ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ತಮಗೆ ಸಾಧ್ಯವಾದಷ್ಟು ಹಣವನ್ನು ಹಾಕಿ, ಹಾಗೇ ಸಂಸ್ಥೆಯಿಂದ ಸ್ವಲ್ಪ ಹಣವನ್ನು ಪಡೆದುಕೊಂಡು ರಗ್ಗು ಖರೀದಿ ಮಾಡಿದ್ದಾರೆ. ಯಾರು ಚಳಿಯಿಂದ ಬಳಲುತ್ತಿರುತ್ತಾರೆ ಅಂತವರಿಗೆ ರಗ್ಗು ವಿತರಣೆ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವಳಿ ನಗರದಲ್ಲಿ ರಾತ್ರಿ ಹಾಗೂ ಮುಂಜಾನೆ ಬೈಕ್ ತೆಗೆದುಕೊಂಡು ಹೋಗಿ ರಗ್ಗು ಕೊಟ್ಟು ಅವರಿಗೆ ಬೆಚ್ಚನೆಯ ನಿದ್ದೆ ಮಾಡೋದಕ್ಕೆ ಅನುಕೂಲ ಮಾಡಿಕೊಡುವ ಕೆಲಸ ಮಾಡುತ್ತಿದ್ದಾರೆ.
ಸುಮಾರು 25ಕ್ಕೂ ಹೆಚ್ಚು ಎನ್‌ಎಸ್‌ಎಸ್ ಘಟಕದ ವಿದ್ಯಾರ್ಥಿಗಳು ರಾತ್ರಿ ಹಾಗೂ ಮುಂಜಾನೆ ಬೈಕ್ ಸಮೇತವಾಗಿ ನಗರದಲ್ಲಿ ಸಂಚಾರ ಮಾಡುತ್ತಾರೆ. ಯಾರಾದರೂ ನಿರ್ಗತಿಕರು ಕಂಡರೆ ಅವರ ಜೊತೆಗೆ ಮಾತಾನಾಡಿ ಅವರಿಗೆ ಅವಶ್ಯಕತೆ ಇದ್ದರೆ, ಉಚಿತವಾಗಿ ಕಂಬಳಿ ವಿತರಣೆ ಮಾಡುತ್ತಾರೆ. ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಚಳಿಯಲ್ಲಿ ಜೀವನ ಮಾಡುವ ನಿರ್ಗತಿಕ ಜನರಿಗೆ ಬೆಚ್ಚನೆಯ ರಗ್ಗು ನೀಡುತ್ತಾರೆ.
ಇನ್ನೂ ಕೆಲವು ಬಾರಿ ರೈಲು ಹಾಗೂ ಬಸ್ ಮಿಸ್ ಆದಾಗ ಮಕ್ಕಳು, ಮಹಿಳೆಯ, ಹಿರಿಯರು ಬಸ್ ನಿಲ್ದಾಣದಲ್ಲಿ ಕೊರೆಯುವ ಚಳಿಯಿಂದ ಬಳಲುತ್ತಿರುತ್ತಾರೆ. ಅಂತಹವರಿಗೆ ಉಚಿತವಾಗಿ ರಗ್ಗು ನೀಡುತ್ತಾರೆ. ಗದಗ ಬಸ್ ನಿಲ್ದಾಣದಲ್ಲಿ ನಾರಾಯಣ ಎಂಬ ಧಾರವಾಡ ಜಿಲ್ಲೆಯ ವ್ಯಕ್ತಿಯೊಬ್ಬರು ರೈಲು ನಿಲ್ದಾಣದಲ್ಲಿ ಚಳಿಯಿಂದ ಬಳಲುತ್ತಿದ್ದರು. ಅವರಿಗೆ ರಗ್ಗು ನೀಡಿದ್ದು, ವಿದ್ಯಾರ್ಥಿಗಳ ಕಾರ್ಯಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಂದ ಸಮಾಜಮುಖಿ ಕೆಲಸ ಕಡಿಮೆಯಾಗುತ್ತಿವೆ. ತಾವಾಯಿತು, ತಮ್ಮ ಅಭ್ಯಾಸ ಆಯ್ತು, ಇಲ್ಲವೇ ಮೊಬೈಲ್ನಲ್ಲಿ ಕಳೆದು ಹೋಗುವವರೆ ಹೆಚ್ಚು. ಆದರೆ ಈ ವಿದ್ಯಾರ್ಥಿಗಳು ತಮ್ಮನ್ನು ತಾವು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಇವರ ಕಾರ್ಯಕ್ಕೆ ಜಿಲ್ಲೆಯ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published On - 4:48 pm, Thu, 26 December 24