
ಕನ್ನಡದ ವೆಬ್ ಸರಣಿ ‘ಅಯ್ಯನ ಮನೆ’ ಈ ವಾರ ಒಟಿಟಿಗೆ ಬಂದಿದೆ. ಕನ್ನಡದಲ್ಲಿ ವೆಬ್ ಸರಣಿ ಅಪರೂಪದಲ್ಲಿ ಅಪರೂಪ. ಹೀಗಿರುವಾಗ ಒಂದೊಳ್ಳೆ ವೆಬ್ ಸರಣಿಯಾಗಿ ‘ಅಯ್ಯನ ಮನೆ’ ಬಂದಿದೆ. ‘ದಿಯಾ’ ಖುಷಿ ಈ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೆಬ್ ಸರಣಿ ನೋಡಿದವರೆಲ್ಲ ಮೆಚ್ಚಿಕೊಂಡಿದ್ದಾರೆ. ಜೀ5ನಲ್ಲಿ ಈ ವೆಬ್ ಸರಣಿ ವೀಕ್ಷಣೆಗೆ ಲಭ್ಯ ಇದೆ.

ರಿಷಬ್ ಶೆಟ್ಟಿ ನಿರ್ಮಾಣ ಮಾಡಿ, ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಾಮಿಡಿ ಥ್ರಿಲ್ಲರ್ ಸಿನಿಮಾ ‘ಲಾಫಿಂಗ್ ಬುದ್ಧ’ ಸಿನಿಮಾ ಈ ವಾರ ಒಟಿಟಿಗೆ ಬಂದಿದೆ. ಕಳೆದ ವರ್ಷ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಸಾಧಾರಣ ಯಶಸ್ಸು ಕಂಡಿತ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ಸನ್ ನೆಕ್ಸ್ಟ್ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ.

ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಕಂಡ ಚಿಯಾನ್ ವಿಕ್ರಂ ಅವರ ತಮಿಳು ಸಿನಿಮಾ ‘ವೀರ ಧೀರ ಸೂರನ್’ ಸಿನಿಮಾ ಒಟಿಟಿಗೆ ಬಂದಿದೆ. ಏಪ್ರಿಲ್ 25ಕ್ಕೆ ಈ ಸಿನಿಮಾ ಒಟಿಟಿಗೆ ಬಂದಿದ್ದು ಅಮೆಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಸಿನಿಮಾನಲ್ಲಿ ವಿಕ್ರಂ ಜೊತೆಗೆ ಎಸ್ಜೆ ಸೂರ್ಯ ಸಹ ನಟಿಸಿದ್ದಾರೆ.

ಕಾಮಿಡಿ ಥ್ರಿಲ್ಲರ್ ಸಿನಿಮಾ ‘ಮ್ಯಾಡ್’ನ ಎರಡನೇ ಭಾಗ ‘ಮ್ಯಾಡ್ ಸ್ಕೇರ್’ ಕೆಲ ವಾರಗಳ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಯ್ತು. ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನವನ್ನೇ ಈ ಸಿನಿಮಾ ತೋರಿತು. ಸಿನಿಮಾದ ಹಾಸ್ಯ ಸನ್ನಿವೇಶಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾದವು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದೆ. ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಮೋಹನ್ಲಾಲ್ ನಟಿಸಿ ಪೃಥ್ವಿರಾಜ್ ಸುಕುಮಾರ್ ನಿರ್ದೇಶನ ಮಾಡಿರುವ ‘ಎಲ್2: ಎಂಪುರಾನ್’ ಸಿನಿಮಾ ಇದೇ ವಾರ ಒಟಿಟಿಗೆ ಬಂದಿದೆ. ಕೆಲ ವಾರಗಳ ಹಿಂದೆ ಚಿತ್ರಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿತ್ತು. ಜೊತೆಗೆ ಕೆಲ ವಿವಾದಗಳ ಕಾರಣಕ್ಕೆ ಬಿಜೆಪಿಯ ಆಕ್ರೋಶಕ್ಕೂ ಕಾರಣವಾಗಿತ್ತು. ಇದೀಗ ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಲಭ್ಯವಿದೆ.

ಸೈಫ್ ಅಲಿ ಖಾನ್, ಜೈದೀಪ್ ಅಹ್ಲಾವತ್ ಇನ್ನೂ ಕೆಲವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಕ್ರೈಂ ಥ್ರಿಲ್ಲರ್ ಸಿನಿಮಾ ‘ದಿ ಜ್ಯುಯೆಲ್ ಥೀಫ್’ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಏಪ್ರಿಲ್ 25ಕ್ಕೆ ತೆರೆಗೆ ಬಂದಿದೆ. ಸಿನಿಮಾವು ಆಭರಣ ಕಳ್ಳರ ಗುಂಪಿನ ಕತೆಯನ್ನು ಒಳಗೊಂಡಿದೆ.