
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಪುರುಷರ 57 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಮನ್ ಸೆಹ್ರಾವತ್ ಕೇವಲ 21 ವರ್ಷ 24 ದಿನಗಳ ವಯಸ್ಸಿನಲ್ಲಿ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ದಾಖಲೆ ಪಿವಿ ಸಿಂಧು ಅವರ ಹೆಸರಿನಲ್ಲಿತ್ತು.

ಇನ್ನು ಕಂಚಿನ ಪದಕದ ಪಂದ್ಯದಲ್ಲಿ ಪೋರ್ಟೊ ರಿಕೊ ಕುಸ್ತಿಪಟುವನ್ನು 13-5 ರಿಂದ ಏಕಪಕ್ಷೀಯ ರೀತಿಯಲ್ಲಿ ಸೋಲಿಸಿದ ಅಮನ್, ಚೊಚ್ಚಲ ಒಲಿಂಪಿಕ್ಸ್ನಲ್ಲೇ ಪದಕಕ್ಕೆ ಮುತ್ತಿಟ್ಟರು. ಆದರೆ ಅಮನ್ಗೆ ಈ ಪದಕ ಸಿಕ್ಕಿದ ಹಿಂದಿನ ಕಥೆಯೇ ಬಲು ರೋಚಕವಾಗಿದೆ.

ವಾಸ್ತವವಾಗಿ ಕಂಚಿನ ಪದಕಕ್ಕೂ ಮುನ್ನ ಅಮನ್ ಸೆಹ್ರಾವತ್ ಅವರ ತೂಕವೂ ಕೂಡ ವಿನೇಶ್ ಫೋಗಟ್ ಅವರಂತೆ ಸಾಕಷ್ಟು ಹೆಚ್ಚಾಗಿತ್ತು. 57 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮನ್, ಸೆಮಿಫೈನಲ್ ಪಂದ್ಯದಲ್ಲಿ ಸೋತಾಗ ಅವರ ತೂಕ 4.5 ಕೆಜಿ ಹೆಚ್ಚಾಗಿತ್ತು. ಅಂದರೆ ಅವರು ಬರೋಬ್ಬರಿ 61.5 ಕೆ.ಜಿ ತೂಗುತ್ತಿದ್ದರು.

ಹೀಗಾಗಿ ಅಮನ್ಗೆ ಕಂಚಿನ ಪದಕ ಸಿಗುವುದು ಅನುಮಾನವಾಗಿತ್ತು. ಆದರೆ ಕೇವಲ 10 ಗಂಟೆಗಳೊಳಗೆ ಅಮನ್ ಬರೋಬ್ಬರಿ 4.5 ಕೆ.ಜಿ ತೂಕವನ್ನು ಇಳಿಸಿಕೊಂಡರು. ತರಬೇತುದಾರರಾದ ಜಗಮಂದರ್ ಸಿಂಗ್ ಮತ್ತು ವೀರೇಂದ್ರ ದಹಿಯಾ, ಒಟ್ಟು 6 ಸದಸ್ಯರ ಕುಸ್ತಿ ತಂಡ ಅಮನ್ ಅವರ ತೂಕವನ್ನು 57 ಕೆ.ಜಿಗೆ ಇಳಿಸುವಲ್ಲಿ ಯಶಸ್ವಿಯಾಯಿತು.

ಹಾಗಾದರೆ ಕೇವಲ 10 ಗಂಟೆಗಳೊಳಗೆ ಅಮನ್ 4.5 ಕೆ.ಜಿ ತೂಕವನ್ನು ಇಳಿಸಿದ್ದು ಹೇಗೆ ಎಂಬುದನ್ನು ನೋಡುವುದಾದರೆ.. ಮೊದಲಿಗೆ ಅಮನ್ ಸೆಹ್ರಾವತ್‌ಗೆ ಒಂದೂವರೆ ಗಂಟೆ ಮ್ಯಾಟ್ ಸೆಷನ್ ನೀಡಲಾಗಿದೆ. ಇದರಲ್ಲಿ ಅವರನ್ನು ನಿಂತಲ್ಲೇ ಕುಸ್ತಿಯಾಡುವಂತೆ ಸೂಚನೆ ನೀಡಲಾಗಿದೆ.

ಇದಾದ ನಂತರ ಅಮನ್ ಸೆಹ್ರಾವತ್‌ಗೆ ಒಂದು ಗಂಟೆ ಬಿಸಿನೀರಿನ ಸ್ನಾನ ಮಾಡಿಸಲಾಗಿದೆ. ರಾತ್ರಿ 12 ಗಂಟೆಯ ನಂತರ, ಜಿಮ್‌ನಲ್ಲಿ ಒಂದು ಗಂಟೆ ಟ್ರೆಡ್‌ಮಿಲ್ ರನ್ ಮಾಡಿಸಲಾಗಿದೆ. ಆ ನಂತರ 30 ನಿಮಿಷಗಳ ಕಾಲ ವಿಶ್ರಾಂತಿ ನೀಡಲಾಗಿದೆ. ಇದಾದ ಬಳಿಕ ಅಮನ್ಗೆ ಮಸಾಜ್, ಲಘು ಜಾಗಿಂಗ್ ಮತ್ತು 15 ನಿಮಿಷಗಳ ಓಟದ ಸೆಷನ್ ಮಾಡಿಸಿ ಅವರ ತೂಕವನ್ನು ಇಳಿಸಲಾಗಿದೆ.

ಒಂದು ರಾತ್ರಿಯಲ್ಲಿ ಇಷ್ಟೆಲ್ಲ ಕಷ್ಟಪಟ್ಟ ಅಮನ್ ಅವರ ತೂಕ ಬೆಳಗಿನ ಜಾವ 4.30ರ ಹೊತ್ತಿಗೆ 56.9 ಕೆಜಿ ಅಂದರೆ ನಿಗದಿತ ಮಿತಿಗಿಂತ 100 ಗ್ರಾಂ ಕಡಿಮೆಯಾಗಿದೆ. ಅಮನ್ ಸೆಹ್ರಾವತ್ ಅವರು 10 ಗಂಟೆಗಳಲ್ಲಿ 4.5 ಕೆಜಿ ತೂಕವನ್ನು ಕಡಿಮೆ ಮಾಡಿರುವುದು ಅಚ್ಚರಿಯ ಸಂಗತಿಯಾಗಿದೆ. ಏಕೆಂದರೆ ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅಧಿಕ ತೂಕದ ಕಾರಣದಿಂದ ಅನರ್ಹರಾಗಿರುವುದು ಎಲ್ಲರಿಗೂ ಗೊತ್ತೆ ಇದೆ.

ವಿನೇಶ್ 50 ಕೆಜಿ ವಿಭಾಗದ ಸ್ಪರ್ಧೆಯ ಫೈನಲ್‌ಗೆ ಪ್ರವೇಶಿಸುವ ಮೂಲಕ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದರು. ಆದರೆ ಫೈನಲ್‌ಗೆ ಮೊದಲು ಅವರು ನಿಗದಿತ ಮಿತಿಗಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆ ಎಂಬುದು ಪತ್ತೆಯಾದ ಬಳಿಕ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಸದ್ಯ ವಿನೇಶ್ ಪ್ರಕರಣ ಸಿಎಎಸ್ನಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲೇ ನಿರ್ಧಾರ ಹೊರಬೀಳಬಹುದು.